ಬೆಂಗಳೂರು: ಐಪಿಎಲ್ 2024ರ 62ನೇ ಪಂದ್ಯ ರಾಯಲ್ ಚಾಲೆಂಜರ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ.
ಏಕೆಂದರೆ ಎರಡೂ ತಂಡಗಳು ಪ್ಲೇಆಫ್ನ ರೇಸ್ನಲ್ಲಿ ಉಳಿಯಲು ಯಾವುದೇ ಬೆಲೆತೆತ್ತಾದರೂ ಪಂದ್ಯ ಗೆಲ್ಲಬೇಕಾಗಿದೆ. ಈ ಪಂದ್ಯದಲ್ಲಿ ಬೆಂಗಳೂರು ಸೋತರೆ ಪ್ಲೇ ಆಫ್ ರೇಸ್ನಿಂದ ಹೊರಗುಳಿಯಲಿದೆ. ಅದೇ ವೇಳೆ ಸೋಲಿನ ಹೊರತಾಗಿಯೂ ಡೆಲ್ಲಿ ಈ ರೇಸ್ನಲ್ಲಿ ಉಳಿಯಲಿದೆ. ಡೆಲ್ಲಿ ತಂಡ 12 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಉಭಯ ತಂಡಗಳ ನಡುವೆ ಇದುವರೆಗೆ 30 ಪಂದ್ಯಗಳು ನಡೆದಿವೆ. ಈ ಪೈಕಿ ಬೆಂಗಳೂರು 18 ಪಂದ್ಯಗಳನ್ನು ಗೆದ್ದಿದ್ದರೆ, ದೆಹಲಿ 11 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದೆ. ಆರ್ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲ್ಲಲು 188 ರನ್ಗಳ ಗುರಿ ನೀಡಿದೆ. ತಂಡದ ಪರ ರಜತ್ ಪಾಟಿದಾರ್ 52 ರನ್, ವಿಲ್ ಜಾಕ್ಸ್ 41 ರನ್ ಕೊಡುಗೆ ನೀಡಿದರು.
ಗುಡುಗಿದ ಪಾಟೀದಾರ್–ಜ್ಯಾಕ್ಸ್: ಕೇವಲ 36 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆರ್ಸಿಬಿ ತಂಡಕ್ಕೆ ಮೂರನೇ ವಿಕೆಟ್ಗೆ ರಜತ್ ಪಾಟೀದಾರ್ ಹಾಗೂ ವಿಲ್ ಜ್ಯಾಕ್ಸ್ ಕೇವಲ 53 ಎಸೆತಗಳಲ್ಲಿ 88 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೈ ಚಳಿ ಬಿಟ್ಟು ಬ್ಯಾಟ್ ಬೀಸಿದ ಪಾಟೀದಾರ್ ಕೇವಲ 29 ಎಸೆತಗಳನ್ನು ಎದುರಿಸಿ ಈ ಆವೃತ್ತಿಯ 5ನೇ ಅರ್ಧಶತಕ ಸಿಡಿಸಿದರು. ಅಂತಿಮವಾಗಿ ಪಾಟೀದಾರ್ 32 ಎಸೆತಗಳನ್ನು ಎದುರಿಸಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ಸಹಿತ 52 ರನ್ ಬಾರಿಸಿ ರಸಿಕ್ ಸಲಾಮ್ಗೆ ವಿಕೆಟ್ ಒಪ್ಪಿಸಿದರು.