ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸಂಜೆ ವೇಳೆ ಮಳೆಯಾಗುತ್ತಿದ್ದು, ಹೀಗಾಗಿ ಭಾನುವಾರ ನಡೆಯಲಿರುವ ಪಂದ್ಯಕ್ಕೂ ವರುಣ ಅಡ್ಡಿಪಡಿಸಲಿದ್ದಾನಾ ಎಂಬ ಆತಂಕ ಎದುರಾಗಿದೆ.
Karnataka weather: ಮೇ 18 ರವರೆಗೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ..!
ಏಕೆಂದರೆ ಈ ಪಂದ್ಯವು ಆರ್ಸಿಬಿ ಪಾಲಿಗೆ ನಿರ್ಣಾಯಕ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದರೆ ಮಾತ್ರ ಆರ್ಸಿಬಿ ತಂಡಕ್ಕೆ ಪ್ಲೇಆಫ್ ಪ್ರವೇಶಿಸಲು ಅವಕಾಶ ಇರಲಿದೆ. ಒಂದು ವೇಳೆ ಪಂದ್ಯ ರದ್ದಾರೆ ಆರ್ಸಿಬಿ ತಂಡ ಪ್ಲೇಆಫ್ ರೇಸ್ನಿಂದ ಹೊರಬೀಳುವುದು ಬಹುತೇಕ ಖಚಿತವಾಗಲಿದೆ.
ಒಂದು ವೇಳೆ ಮಳೆ ನಿಂತರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುವುದು ಖಚಿತ. ಹಾಗಿದ್ರೆ ಮಳೆ ನಿಂತ ಬಳಿಕ ಪಂದ್ಯ ಹೇಗೆ ನಡೆಯಲಿದೆ ಎಂದು ತಿಳಿಯೋಣ
ಬೆಂಗಳೂರಿನಲ್ಲಿ ಇಂದು ನಡೆಯಬೇಕಿರುವ ಪಂದ್ಯ ಶುರುವಾಗಬೇಕಿರುವ ಸಮಯ 7:30 PM. ಇದಕ್ಕನುಗುಣವಾಗಿ ಪಂದ್ಯದ ಹೆಚ್ಚುವರಿ ಕಟ್ ಆಫ್ ಸಮಯ 11:50 PM. ಅದುವರೆಗೆ ಪಂದ್ಯ ಆಯೋಜಿಸಲು ಸಾಧ್ಯನಾ ಎಂಬುದನ್ನು ಎದುರು ನೋಡಲಿದ್ದಾರೆ. ಇದರ ನಡುವೆ ಪಂದ್ಯ ನಡೆಸಲು ಅವಕಾಶವಿದ್ದರೆ ಹೆಚ್ಚುವರಿ ಸಮಯವನ್ನು ಬಳಸಲಿದ್ದಾರೆ. ಅಂದರೆ ಮಳೆಯ ಕಾರಣ ಪಂದ್ಯದ ಆರಂಭವು ವಿಳಂಬವಾದರೆ ಅಥವಾ ಅಡಚಣೆಯ ಸಂದರ್ಭದಲ್ಲಿ, ಅರವತ್ತು ನಿಮಿಷಗಳ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಲಾಗುತ್ತದೆ. ಅದರಂತೆ ಪೂರ್ಣ 20 ಓವರ್ಗಳನ್ನು ಆಡಿಸಲು ಅವಕಾಶ ಇದೆಯಾ ಎಂದು ನೋಡಲಾಗುತ್ತದೆ. ಆದರೆ ನಿಗದಿತ ಸಮಯದೊಳಗೆ 20 ಓವರ್ಗಳ ಪಂದ್ಯವನ್ನು ಆಯೋಜಿಸಲು ಸಾಧ್ಯವಿಲ್ಲ ಎಂಬುದು ಕಂಡು ಬಂದರೆ ಓವರ್ಗಳ ಕಡಿತ ಮಾಡಲಾಗುತ್ತದೆ. ಅಂದರೆ ಪ್ರತಿ ಎಂಟು ನಿಮಿಷಗಳ ನಷ್ಟಕ್ಕೆ ಒಂದು ಓವರ್ ಅನ್ನು ಕಡಿತಗೊಳಿಸಲಾಗುತ್ತದೆ. ಇಲ್ಲಿ ಟೈಮ್ ಔಟ್ ಸಮಯ ಹಾಗೂ ಇನ್ನಿಂಗ್ಸ್ ಬ್ರೇಕ್ಗಳನ್ನು ಸಹ ತೆಗೆದು ಹಾಕಲಾಗುತ್ತದೆ. ಆ ಮೂಲಕ ಓವರ್ ಕಡಿತದೊಂದಿಗೆ ಪಂದ್ಯ ಆಯೋಜಿಸಲಾಗುತ್ತದೆ. ಇನ್ನು ಪಂದ್ಯ ಶುರುವಾದ ಬಳಿಕ ಮಳೆ ಬಂದರೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತದೊಂದಿಗೆ ಟಾರ್ಗೆಟ್ ನೀಡಲಾಗುತ್ತದೆ. ಈ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.ಆದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಫಲಿತಾಂಶ ನಿರ್ಧರಿಸಲು ಕನಿಷ್ಠ 5 ಓವರ್ಗಳ ಪಂದ್ಯಗಳನ್ನು ಆಡಲೇಬೇಕು. ಇದಕ್ಕಿಂತ ಕಡಿಮೆ ಓವರ್ಗಳ ಪಂದ್ಯಗಳನ್ನು ಆಯೋಜಿಸಲಾಗುವುದಿಲ್ಲ. ಅದರಂತೆ ಎರಡೂ ತಂಡಗಳು ಕನಿಷ್ಠ 5 ಓವರ್ಗಳನ್ನು ಬೌಲಿಂಗ್ ಮಾಡಿದ್ರೆ ಮಾತ್ರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ
ಒಂದು ವೇಳೆ ಮೊದಲ ಇನಿಂಗ್ಸ್ ಆಡಿದ ತಂಡ 10 ಓವರ್ ಆಡಿದ್ರೆ, 2ನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ತಂಡ 5 ಓವರ್ಗಳನ್ನು ಆಡಿರಲೇಬೇಕು. ಅಂದರೆ ಮಾತ್ರ ಇಲ್ಲಿ ಡಕ್ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಲಾಗುತ್ತದೆ. ಹೀಗಾಗಿಯೇ ಆರ್ಸಿಬಿ ತಂಡದ ಗೆಲುವು ನಿರ್ಧರಿಸಲು ಕನಿಷ್ಠ 5 ಓವರ್ಗಳ ಪಂದ್ಯವಾದರೂ ನಡೆಯಲೇಬೇಕು.
ಅಂದಹಾಗೆ ಆರ್ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದ 5 ಓವರ್ಗಳ ಪಂದ್ಯದ ಆಯೋಜನೆಗೆ ಕಟ್ ಆಫ್ ಟೈಮ್ 10:56 PM. ಈ ವೇಳೆಗೆ ಪಂದ್ಯ ಆಯೋಜಿಸುವಂತಹ ಪರಿಸ್ಥಿತಿ ಇರದಿದ್ದರೆ ಮ್ಯಾಚ್ ಅನ್ನು ರದ್ದುಗೊಳಿಸುವ ಬಗ್ಗೆ ಮ್ಯಾಚ್ ರೆಫರಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.