ಮದ್ದೂರು:- ಆರ್.ಅಶೋಕ್ ಒಬ್ಬ ಬೋಗಸ್ ಮನುಷ್ಯ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ದ ಕೈ ಶಾಸಕ ಕದಲೂರು ಉದಯ್ ವಾಗ್ದಾಳಿ ಮಾಡಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಉದಯ್, ನಾನು ಹೊಸದಾಗಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ತಿಳಿದುಕೊಳ್ಳಬೇಕಾದದ್ದು ಬಹಳಷ್ಟು ಇದೆ. ಶಾಸಕನ ಕೆಲಸ ಏನೆಂದು ತಿಳಿದುಕೊಂಡು ಒಂದಷ್ಟು ಜನಗಳ ಸೇವೆ ಮಾಡೋಣಾ. ಆನಂತರ ಟಿಕಾಕಾರರಿಗೆ ಉತ್ತರಿಸೋಣ ಎಂದರು.
ನಿಗಮ ಮಂಡಳಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಪೈಪೋಟಿ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ಯಾವುದೇ ರೀತಿಯಾದಂತಹ ಭಿನ್ನಾಭಿಪ್ರಾಯ ಇಲ್ಲ. ಡಿಕೆ ಶಿವಕುಮಾರ್ ಕೂಡ ನಮ್ಮ ನಾಯಕರೇ, ಸಿದ್ದರಾಮಯ್ಯ ಕೂಡ ನಮ್ಮ ಮುಖ್ಯಮಂತ್ರಿಗಳೇ. ಎಲ್ಲವನ್ನ ಸಮಾಧಾನವಾಗಿ ಸಮನಾಗಿ ಎಲ್ಲರಿಗೂ ಹಂಚುತ್ತಾರೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ.
ಹಿರಿಯತನ ಸೇವೆ ಆಧರಿಸಿ ನಿಗಮ ಮಂಡಳಿ ಸ್ಥಾನ ಕೊಡ್ತಾರೆ. ನಾನು ಯಾವುದೇ ನಿಗಮ ಮಂಡಳಿಯ ಆಕಾಂಕ್ಷಿಯಲ್ಲ. ನಾನು ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು.
ಸಿಎಂ ಸಿದ್ದರಾಮಯ್ಯ ಜನತಾದರ್ಶನವನ್ನ ಆರ್.ಅಶೋಕ್ ಟೀಕಿಸಿದ ವಿಚಾರವಾಗಿ ಮಾತನಾಡಿ, ಅಶೋಕ್ ಒಬ್ಬ ಬೋಗಸ್ ಮನುಷ್ಯ. ಬಿಜೆಪಿ ಎಷ್ಟು ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು ಹಾಗೆಲ್ಲ ಉನ್ನತ ಸ್ಥಾನವನ್ನು ಪಕ್ಷ ನೀಡಿದೆ. ಒಕ್ಕಲಿಗರ ಪ್ರತಿನಿಧಿಯಾಗಿ ಎಲ್ಲಾ ಬಾರಿಯೂ ಸಚಿವರಾಗಿದ್ದಾರೆ. ಉಪಮುಖ್ಯಮಂತ್ರಿಯಾಗಿದ್ದಾರೆ ಆದರೆ ಅವರಿಂದ ಜನಾಂಗಕ್ಕೆ ಯಾವುದೇ ಕೊಡುಗೆ ಇಲ್ಲ ಎಂದರು.
ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿ, ಮಂಡ್ಯ ಲೋಕಸಭಾ ಅಭ್ಯರ್ಥಿ ಸಂಬಂಧ ಸ್ಥಳೀಯ ಶಾಸಕರು, ಪಕ್ಷದ ನಾಯಕರು ಚರ್ಚಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದರು.