ಲಂಡನ್: ರಾಣಿ ಎರಡನೇ ಎಲಿಜಬೆತ್ ವಿಂಡ್ಸರ್ ಅರಮನೆಯಲ್ಲಿ ಕ್ರಿಸ್‍ಮಸ್ ದಿನಗಳನ್ನು ಕಳೆಯುತ್ತಿರುವ ಸಂದರ್ಭದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿದ್ದ 19 ವರ್ಷದ ಭಾರತೀಯ ಸಿಖ್ ವ್ಯಕ್ತಿಯನ್ನು ಬಂಧಿಸಲಾಗಿದೆ. ವಿಂಡ್ಸನ್ ಅರಮನೆ ಮೈದಾನದಲ್ಲಿ ಭದ್ರತೆಯನ್ನು ಉಲ್ಲಂಘಿಸಿ ಒಳಗೆ ಬಂದಿದ್ದ ವ್ಯಕ್ತಿ ಮಾರಕಾಸ್ತ್ರಗಳನ್ನು ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿ ಜಲಿಯನ್ ವಾಲಾಬಾಗ್ ಘಟನೆಗೆ ಸೇಡು ತೀರಿಸಿಕೊಳ್ಳಲು ಬಂದಿರುವ ಬಗೆಗಿನ ವೀಡಿಯೋ ಪತ್ತೆಯಾಗಿದೆ. ಜಸ್ವಂತ್ ಸಿಂಗ್ ಚೈಲ್ ಎಂಬ ವ್ಯಕ್ತಿ ಸ್ನ್ಯಾಪ್‍ಶಾಟ್‍ನಲ್ಲಿ ಹಂಚಿಕೊಂಡಿದ್ದ ವೀಡಿಯೋದಲ್ಲಿ ಆತನ ವಿಕೃತ ಭಾವನೆ ಬಯಲಾಗಿದೆ. ನಾನು ಏನು ಮಾಡಿದ್ದೇನೆ ಹಾಗೂ ಏನು ಮಾಡುತ್ತೇನೆ ಎಂಬುದರ ಬಗ್ಗೆ ಕ್ಷಮೆ ಇರಲಿ. ನಾನು ರಾಜಮನೆತನದ ರಾಣಿ ಎಲಿಜಬೆತ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದೇನೆ.

ಇದು 1919ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಮಡಿದವರಿಗೆ ಪ್ರತಿಕಾರ. ತಮ್ಮ ಜನಾಂಗದ ಕಾರಣದಿಂದ ಕೊಲ್ಲಲ್ಪಟ್ಟ, ಅವಮಾನಿತ ಹಾಗೂ ತಾರತಮ್ಯಕ್ಕೆ ಒಳಗಾದವರಿಗೆ ಇದು ಪ್ರತಿಕಾರವಾಗಿದೆ ಎಂದು ಜಸ್ವಂತ್ ಸಿಂಗ್ ಮುಖವನ್ನು ಪರದೆಯಿಂದ ಮುಚ್ಚಿಕೊಂಡು ಹೇಳಿದಂತಹ ವೀಡಿಯೋ ಪತ್ತೆಯಾಗಿದೆ. ಕೋಟೆಯ ಮೈದಾನದಲ್ಲಿ ಪತ್ತೆಯಾಗಿದ್ದ ಜಸ್ವಂತ್‍ನನ್ನು ಮಾನಸಿಕ ಆರೋಗ್ಯ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
