ಚಾಮರಾಜನಗರ, ಜ.5- ರಾಮನಗರ ಕಾರ್ಯಕ್ರಮವೊಂದರಲ್ಲಿ ಸಂಸದ ಡಿ.ಕೆ.ಸುರೇಶ್ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರ ಮೇಲೆ ಗೂಂಡಾಗಿರಿ ನಡೆಸಿರುವುದನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಭಾವಚಿತ್ರ ಸುಟ್ಟು ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಆವರಣದಲ್ಲಿ ಬಿಜೆಪಿ ಹಾಸನ ಜಿಲ್ಲಾ ಪ್ರಭಾರಿ, ಚಾಮರಾಜನಗರ ಜಿಲ್ಲಾ ಮುಖಂಡ ನಿಜಗುಣರಾಜು ಅವರ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ, ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ಭಾವಚಿತ್ರ ಸುಟ್ಟು ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಹಾಸನ ಜಿಲ್ಲಾ ಪ್ರಭಾರಿ, ಚಾಮರಾಜನಗರ ಜಿಲ್ಲಾ ಮುಖಂಡ ನಿಜಗುಣರಾಜು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಮನಗರಕ್ಕೆ ಆಗಮಿಸಿ 300 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಡಿ.ಕೆ.ಸುರೇಶ್ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಉಪಮುಖ್ಯಮಂತ್ರಿಗಳು ಎನ್ನುವುದನ್ನೂ ಲೆಕ್ಕಿಸದೆ ಅವರ ಮೇಲೆ ಹಲ್ಲೆಗೆ ಮುಂದಾಗಿರುವುದು ಇವರ ಗೂಂಡಾವರ್ತನೆ ಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಡಿ.ಕೆ.ಸುರೇಶ್ ವರ್ತನೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತಿಳಿಸುತ್ತದೆ ಕನಕಪುರ ಕ್ಷೇತ್ರವನ್ನು ಒಂದು ಗೂಂಡಾ ರಾಜ್ಯ ಎಂದು ತಿಳಿದುಕೊಂಡಿದ್ದು, ಗೂಂಡಾಗಿರಿ ಮಾಡುತ್ತಿರುವ ಸಹೋದರರು ನರೇಂದ್ರಮೋದಿ ನೇತೃತ್ವದಲ್ಲಿ ದೇಶ, ರಾಜ್ಯದಲ್ಲಿ ಬಿಜೆಪಿಯ ದೊಡ್ಡಸೈನ್ಯವಿದೆ ಎಂಬುದನ್ನು ತಿಳಿದುಕೊಳ್ಳಬೇಕು ಇಂತಹ ಗೂಂಡಾ ವರ್ತನೆಗೆ ಸಚಿವ ಅಶ್ವಥ್ ನಾರಾಯಣ್ ತಕ್ಕ ಉತ್ತರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ನಿಮ ಗೂಂಡಾಸಂಸ್ಕೃತಿಗೆ ತಕ್ಕ ಉತ್ತರ ನೀಡಲಿದ್ದಾರೆ . ಡಿ.ಕೆ.ಸುರೇಶ್ ಮತ್ತು ಡಿ.ಕೆ.ಶಿವಕುಮಾರ್ ತಮ್ಮ ಸ್ಥಾನಗಳಿಗೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಜಿ.ಪಂ.ಮಾಜಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್, ನಗರಸಭಾ ಸದಸ್ಯ ಸುದರ್ಶನಗೌಡ, ಪಣ್ಯದಹುಂಡಿ ಸತೀಶ್, ತಾ.ಪಂ.ಮಾಜಿ ಸದಸ್ಯ ಮಹೇಶ್, ದೊಡ್ಡಮೋಳೆ ರಂಗನಾಥ್, ರಂಗಸ್ವಾಮಿ, ಉಡಿಗಾಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರು, ಚಂದಕವಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯೇಂದ್ರ, ಯುವಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್, ಮಂಗಲರವಿ, ನಾಗವಳ್ಳಿ ಶಕ್ತಕೇಂದ್ರದ ಅಧ್ಯಕ್ಷ ನಾಗಮಲ್ಲೇಶ, ಅಲೂರು ಗ್ರಾ.ಪಂ.ಸದಸ್ಯರಾದ ಶಿವಾನಂದ್, ಬಾಲರಾಜ್ ಇತರರು ಭಾಗವಹಿಸಿದ್ದರು.

