ಆನೇಕಲ್: ಕೈಮಗ್ಗ ನೇಕಾರರಿಗೆ ಮಂಜೂರಾದ ಮನೆಗಳಿಗೆ ಹಕ್ಕು ಪತ್ರ ನೀಡಿ ಇಲ್ಲಿಯವರೆಗೂ ನೊಂದಾಣಿ ಮಾಡಿಸದೇ ನಿರ್ಲಕ್ಷ್ಯ ಮಾಡುತ್ತಿರುವ ಕೈಮಗ್ಗ ಅಭಿವೃದ್ದಿ ನಿಗಮದ ಅಧಿಕಾರಿಗಳ ವಿರುದ್ದ ಇಂದು ಆನೇಕಲ್ ನ KHDC ಕಾಲೋನಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
1983 ರಲ್ಲಿ ಕೈಮಗ್ಗ ನೇಕಾರರಿಗಾಗಿ 102 ಮನೆಗಳನ್ನ ಹಣ ಕಟ್ಟಿಸಿಕೊಂಡು ಸರ್ಕಾರದಿಂದ ಮಂಜೂರು ಮಾಡಿ ಹಕ್ಕು ಪತ್ರವನ್ನ ವಿತರಣೆ ಮಾಡಲಾಗಿದೆ. 24 ವರ್ಷಗಳ ಬಳಿಕ ಆ ಮನೆಯನ್ನ ಮಾಲೀಕರಿಗೆ ನೊಂದಾಣಿ ಮಾಡಿಕೊಡುವುದಾಗಿಯೂ ಕರಾರು ಮಾಡಿಕೊಡಲಾಗಿತ್ತು. ಅದರೆ 37 ವರ್ಷ ಕಳೆದರೂ ಸಹ ಹಕ್ಕು ಪತ್ರ ನೀಡಿರುವ ಮಾಲೀಕರಿಗೆ ಮನೆಯನ್ನ ನೊಂದಾಣಿ ಮಾಡಿಕೊಡುತ್ತಿಲ್ಲ.

ಈ ಬಗ್ಗೆ ಅಧಿಕಾರಿಗಳನ್ನ ಎಷ್ಟೇ ಬಾರಿ ಕೇಳಿದರು ಅವರಿಂದ ಸಮರ್ಪಕ ಉತ್ತರ ಬರುತ್ತಿಲ್ಲ ಹೀಗಾಗಿ ಇಂದು ಇಲ್ಲಿನ ಕೈಮಗ್ಗ ನೇಕಾರರ ಕುಟುಂಬಗಳು ಬೀದಿಗೆ ಇಳಿದು ಹೋರಾಟ ನಡೆಸಿದರು. ಕೈಮಗ್ಗ ಅಭಿವೃದ್ದಿ ನಿಗಮದ ಅಧಿಕಾರಿಗಳ ಬೇಜವಬ್ದಾರಿತನದಿಂದ ಇಲ್ಲಿನ ವಾಸ ಮಾಡುವ ಕೈ ಮಗ್ಗ ನೇಕಾರರಿಗೆ ಸೂಕ್ತ ಕೆಲಸವಿಲ್ಲ. ಅಲ್ಲದೇ ಮನೆಗಳಿಗೂ ಸಹ ಸೂಕ್ತ ದಾಖಲಾತಿಯನ್ನ ನೀಡುತ್ತಿಲ್ಲ. ತಾವು ಹಣ ಪಾವತಿಸಿ ಮಂಜೂರಾಗಿರುವ ಮನೆಗಳಿಗೆ ಸರ್ಕಾರದಿಂದ ಕೂಡಲೇ ನೊಂದಾಣಿ ಮಾಡಿಕೊಡಬೇಕು, ಅಲ್ಲಿಯವರೆಗೂ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.