ಧಾರವಾಡ: ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಶುಲ್ಕವಿಧಿಸಿರುವ ಜೊತೆಗೆ ವಿವಿಧ ಸೇವೆಗಳ ಶುಲ್ಕ ಹೆಚ್ಚಿಸಿರುವ ರಾಜ್ಯ ಸರ್ಕಾರ ನಡೆಯನ್ನು ಖಂಡಿಸಿ ಹಾಗೂ ಶುಲ್ಕ ಹಿಂಪಡೆಯಬೇಕು ಎಂದು ಅಗ್ರಹಿಸಿ, ಧಾರವಾಡದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ, ಸೋಷಿಯಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣ, ವಸತಿ, ಆಹಾರ ಸೇರಿ ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅಧಿಕಾರದ ನಡೆಸುವ ಸರ್ಕಾರದ ಮುಖ್ಯ ಕರ್ತವ್ಯವಾಗಿದೆ. ಆದರೆ ಇಂದು ರಾಜ್ಯದಲ್ಲಿ ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಮೂಲಭೂತ ಸೌಕರ್ಯಗಳಿಗೂ ಶುಲ್ಕವಿಧಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ..?. ಆಳು ಸರ್ಕಾರಗಳ ಜನವಿರೋಧಿ ನೀತಿಯಿಂದ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಸಾಗಿದೆ. ಇದರಿಂದ ಜನ ತತ್ತರಿಸಿ ಹೋಗಿದ್ದಾರೆ.
ಇಂತಹ ಸಮಯದಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿರುವ ಸರ್ಕಾರ ಈಗ ಆರೋಗ್ಯ ಸೇವೆಗೂ ಶುಲ್ಕ ವಿಧಿಸಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಈ ಕೂಡಲೇ ಸರ್ಕಾರಿ ಆಸ್ಪತ್ರೆಗೆ ವಿಧಿಸಿರುವ ಶುಲ್ಕ ಸೇರಿ ವಿವಿಧ ಸೇವೆಗಳ ಶುಲ್ಕ ಏರಿಕೆ ಹಿಂದಕ್ಕೆ ಪಡೆಯಲು ಆಗ್ರಹಿಸಿದರು. ಒಂದು ವೇಳೆ ನಮ್ಮ ಬೇಡಿಕೆಗೆ ಸ್ಪಂದನೆ ಮಾಡದಿದ್ದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟಕ್ಲೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.