ಪ್ರೊ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಯುಪಿ ಯೋಧಾಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಮೂರು ಅಂಕಗಳ ರೋಚಕ ಗೆಲುವು ಸಾಧಿಸುವ ಮೂಲಕ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿತು. ಬೆಂಗಳೂರು ಪಾಲಿಗೆ ಪ್ರಮುಖವಾಗಿದ್ದ ಪಂದ್ಯದಲ್ಲಿ ಬುಲ್ಸ್ ಟೀಮ್ 38-35 ಅಂತರದಿಂದ ಯುಪಿ ಯೋಧಾಸ್ ತಂಡವನ್ನು ಸೋಲಿಸಿತು.
ಆಡಿದ 20 ಪಂದ್ಯಗಳಿಂದ 12 ಗೆಲುವು ಸಾಧಿಸಿ ಒಟ್ಟು 68 ಅಂಕ ಸಂಪಾದನೆ ಮಾಡಿರುವ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಆ ಮೂಲಕ ಪ್ಲೇ ಆಫ್ ಸ್ಥಾನವನ್ನು ಖಚಿತ ಮಾಡಿಕೊಂಡ ಮೂರನೇ ತಂಡ ಎನಿಸಿದೆ. ಮೊದಲ ಎರಡು ಸ್ಥಾನಗಳಲ್ಲಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಪುಣೇರಿ ಪಲ್ಟನ್ ಈಗಾಗಲೇ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಅದಲ್ಲದೆ, ಇದೇ ಸ್ಥಾನವನ್ನು ಉಳಿಸಿಕೊಂಡು ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ.

ಮೂರನೇ ಸ್ಥಾನದಲ್ಲಿದ್ದ ಯುಪಿ ಯೋಧಾಸ್ ವಿರುದ್ದ ಬೆಂಗಳೂರು ಬುಲ್ಸ್‌ಗೆ ಮಹತ್ವದ ಪಂದ್ಯ ಎನಿಸಿತ್ತು. 14ನೇ ನಿಮಿಷದಲ್ಲಿಯೇ ಎದುರಾಳಿಯನ್ನು ಆಲೌಟ್ ಮಾಡಿ 13-10 ಮುನ್ನಡೆ ಪಡೆದುಕೊಂಡ ಬೆಂಗಳೂರು ಬುಲ್ಸ್, ಮೊದಲ ಅವಧಿಯ ಮುಕ್ತಾಯದ ವೇಳೆಗೆ 19-14ರ ಮುನ್ನಡೆ ಕಾಯ್ದುಕೊಂಡಿತ್ತು. ದ್ವಿತೀಯಾರ್ಧದ ಆಟ ಆರಂಭವಾದ ಬಳಿಕವೂ ಬೆಂಗಳೂರು ಬುಲ್ಸ್‌ನ ಅಂಕ ಗಳಿಕೆಯ ಓಟ ನಿಲ್ಲಲಿಲ್ಲ.
ಪ್ರದೀಪ್ ನರ್ವಾಲ್ ಅವರನ್ನು ಪಂದ್ಯದಲ್ಲಿ ಅಂದಾಜು 25 ನಿಮಿಷಗಳ ಕಾಲ ಹೊರಗಿಡುವ ಮೂಲಕ ಬೆಂಗಳೂರು ಬುಲ್ಸ್ ಚಾಣಾಕ್ಷ ಆಟವಾಡಿತು. ಕೊನೆಗೆ ಇದೇ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಬೆಂಗಳೂರು ಬುಲ್ಸ್ ತಂಡಕ್ಕೆ ಇನ್ನೂ ಎರಡು ಪಂದ್ಯ ಲೀಗ್ ಹಂತದಲ್ಲಿ ಬಾಕಿ ಇದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ, ಜೈಪುರ ಹಾಗೂ ಪುಣೆ ತಂಡಗಳು ಸೋಲು ಕಂಡಲ್ಲಿ ನೇರವಾಗಿ ಸೆಮಿಫೈನಲ್‌ಗೇರುವ ಅವಕಾಶ ಕೂಡ ಇದೆ.
