ಬೆಂಗಳೂರು: ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ 38-26 ಅಂಕಗಳ ಅಂತರದಿಂದ ಪುಣೆ ತಂಡವನ್ನು ಬಗ್ಗುಬಡಿದಿದೆ. ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 39-37 ಅಂಕಗಳಿಂದ ತೆಲುಗು ಟೈಟನ್ಸ್ ವಿರುದ್ಧ ರೋಚಕ ಜಯ ಸಾಧಿಸಿತು. ರೈಡರ್ಗಳಾದ ಸಚಿನ್ ಸೂಪರ್ 10(10), ಪ್ರಶಾಂತ್ ರೈ 5 ಅಂಕ ಮತ್ತು ಡಿಫೆಂಡರ್ ತ್ರಿಮೂರ್ತಿಗಳಾದ ಸುನೀಲ್(4 ಅಂಕ), ಮೊಹಮ್ಮದ್ರೇ ಝಾ ಚಿಯಾನೆ(3 ಅಂಕ) ಮತ್ತು
ಸಜಿನ್ ಸಿ(3 ಅಂಕ) ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಯುವ ಆಟಗಾರರ ಉತ್ತಮ ಪ್ರದರ್ಶನದ ಹೊರತಾಗಿಯೂ ಉತ್ತಮ ಗುಣಮಟ್ಟದ ರೈಡರ್ಗಳ ಕೊರತೆಯಿಂದ ಪುಣೆ ಸತತ 2ನೇ ಸೋಲು ಕಂಡಿತು. ಯುವ ರೈಡರ್ ಮೋಹಿತ್ ಗೋಯಟ್ 7, ಅಸ್ಲಮ್ ಇನಾಮ್ದಾರ್ 6 ಮತ್ತು ಡಿಫೆಂಡರ್ ಸೋಮ್ಬಿರ್ 5 ಅಂಕ ಪಡೆದು ಪಾಟ್ನಾಗೆ ಪ್ರತಿರೋಧವೊಡ್ಡಿದ್ದರು.

ಸ್ಟೀಲರ್ಸ್ಗೆ ರೋಚಕ ಜಯ
ಮೀತು ಮಹೇಂದರ್(12) ಮತ್ತು ರೋಹಿತ್ ಗುಲಿಯಾ(8) ಅವರ ಅತ್ಯುತ್ತಮ ರೈಡಿಂಗ್ ಮತ್ತು ರವಿಕುಮಾರ್(4), ಮೋಹಿತ್(3) ಮತ್ತು ಸುರೇಂದರ್ ನಾಡ(3) ಅವರ ಅದ್ಭುತ ಟ್ಯಾಕಲ್ ನೆರವಿನಿಂದ ಸ್ಟೀಲರ್ಸ್ 2 ಅಂಕಗಳ ರೋಚಕ ಜಯ ಸಾಧಿಸಿತು. ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದ ಸಿದ್ದಾರ್ಥ್ ದೇಸಾಯಿ(9) ಗಾಯದ ಕಾರಣ ದ್ವಿತೀಯಾರ್ಧದಲ್ಲಿ ಕಣಕ್ಕಿಳಿಯದಿದ್ದರಿಂದ ತೆಲುಗು ಟೈಟಾನ್ಸ್ ಹಿನ್ನಡೆ ಅನುಭವಿಸಿತು. ಆದರೂ ಅಂಕಿತ್ ಬೆನಿವಾಲ್(9), ರಾಕೇಶ್ ಗೌಡ(7) ಅಂಕ ಪಡೆದು ಸೋಲಿನ ಅಂತರವನ್ನು ತಗ್ಗಿಸಿದರು.