ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೊಸ ವರ್ಷಕ್ಕೆ ಹೊಸ ಕಾರು ಖರೀದಿ ಮಾಡಿದ್ದಾರೆ. 12 ಕೋಟಿಗೂ ಅಧಿಕ ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ S650 ಕಾರು ಖರೀದಿ ಮಾಡಿದ್ದಾರೆ. ಮೋದಿಯವರ ರಕ್ಷಣೆಗಾಗಿ ಎಸ್‌ಪಿಜಿ ಬೇಡಿಕೆ ಮೇರೆಗೆ ಈ ಶಸ್ತ್ರಸಜ್ಜಿತ ಕಾರಿನ್ನು ಖರೀದಿಸಲಾಗಿದೆ. ಈ ಕಾರು ಎಂತಹದ್ದೇ ಸ್ಫೋಟವಾದರೂ ತಡೆದುಕೊಳ್ಳುವ ಸಾಮರ್ಥ್ಯ ಹಾಗೂ ಎಲ್ಲಾ ವಿಧದ ದಾಳಿಗಳನ್ನು ತಡೆದುಕೊಳ್ಳಲು ಹೈಟೆಕ್ ರಕ್ಷಾಕವಚವಾಗಿದೆ.
ಈ ಕಾರಿನ ವಿಶೇಷತೆ ?

ಇದೀಗ ನರೇಂದ್ರ ಮೋದಿ ಬಳಕೆ ಮಾಡುತ್ತಿರುವ ಮರ್ಸಿಡಸ್ ಮೇಬ್ಯಾಕ್ S650 ಕಾರು 6.0 ಲೀಟರ್ ಸಾಮರ್ಥ್ಯದ ಅವಳಿ ಟರ್ಬೋ V12 ಎಂಜಿನ್ನಿಂದ ಚಾಲಿತವಾಗುತ್ತದೆ. ಗಂಟೆಗೆ 160 ಕಿಮೀಗಳಷ್ಟು ವೇಗವಾಗಿ ಓಡುತ್ತದೆ. ಕಾರಿನ ಕಿಟಕಿ ಮತ್ತು ಇಡೀ ಮೈ ಗುಂಡು ನಿರೋಧಕವಾಗಿದ್ದು, ಸ್ಟೀಲ್ ಕೋರ್ ಗುಂಡುಗಳನ್ನು ತಡೆದುಕೊಳ್ಳಬಹುದು. ಈ ಕಾರಿನಲ್ಲಿ ವಿಶೇಷವಾದ ರನ್-ಫ್ಲಾಟ್ ಟೈರ್‌ಗಳಿದೆ.
ಇದು 2010ರ ಸರಣಿಯ ಸ್ಫೋಟಕ ಪ್ರೂಫ್ ರೇಟಿಂಗ್ ಪಡೆದುಕೊಂಡಿದ್ದು, ಕೇಲವೇ ಮೀಟರ್ ಅಂತರದಲ್ಲೇ ಟ್ರಿನಿಟ್ರೋಟೊಲ್ಯೂನ್ ಸ್ಫೋಟವಾದರೂ ಈ ಕಾರು ತಡೆದುಕೊಳ್ಳಬಹುದು. ಅನಿಲ ದಾಳಿ ಸಂದರ್ಭದಲ್ಲೂ ಕಾರು ರಕ್ಷಣೆ ಒದಗಿಸಬಲ್ಲದು. ಐಷಾರಾಮಿ ಇಂಟೀರಿಯರ್ ಸೇರಿ ಸುಖಾಸೀನ ಆಸನಗಳ ವ್ಯವಸ್ಥೆಯಿದ್ದು ಸೀಟ್ನಲ್ಲಿ ಆರಾಮಾಗಿ, ಕಾಲು ಚಾಚಿ ಕುಳಿತುಕೊಳ್ಳಬಹುದಾದ ವ್ಯವಸ್ಥೆಯೂ ಇದೆ.