ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಗೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಟೆಸ್ಲಾ ಸಂಸ್ಥಾಪಕ, ಟ್ವಿಟರ್ ಮಾಲಿಕ, ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ವಾಷಿಂಗ್ಟನ್ನಲ್ಲಿರುವ ಬ್ಲೇರ್ ಹೌಸ್ನಲ್ಲಿ ಎಲೋನ್ ಮಸ್ಕ್ ಕುಟುಂಬ ಸಮೇತ ಮೋದಿ ಅವರನ್ನ ಭೇಟಿಯಾಗಿದ್ದಾರೆ. ಇದೇ ವೇಳೆ ಮೋದಿ ಅವರಿಗೆ ವಿಶೇಷ ಉಡುಗೊರೆಯನ್ನೂ ನೀಡಿ ಸ್ವಾಗತ ಕೋರಿದ್ದಾರೆ. ಬಳಿಕ ಬ್ಲೇರ್ ಹೌಸ್ನಲ್ಲೇ ಮಹತ್ವದ ವಿಚಾರಗಳ ಕುರಿತು ಕೆಲ ಹೊತ್ತು ಚರ್ಚಿಸಿದ್ದಾರೆ.
2 ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಭಾರತಕ್ಕೆ ಆಗಮಿಸಲಿದ್ದಾರೆ. ಟ್ರಂಪ್ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ಇದು ಪ್ರಧಾನಿ ಮೋದಿ ಅವರ ಮೊದಲ ಭೇಟಿಯಾಗಿದೆ. ಆಮದು ಸುಂಕಗಳ ಮೇಲಿನ ಕ್ರಮಗಳ ನಡುವೆ ಟ್ರಂಪ್ ಅವರ ಭೇಟಿಗಾಗಿ ಮೋದಿ ಅಮೆರಿಕಕ್ಕೆ ತೆರಳಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರನ್ನು ಭೇಟಿ ಮಾಡಿದರು ಮತ್ತು ಉಭಯ ದೇಶಗಳ ನಡುವಿನ ಬಾಂಧವ್ಯದ ವಿವಿಧ ಅಂಶಗಳನ್ನು ಚರ್ಚಿಸಿದರು. ತುಳಸಿ ಗಬ್ಬಾರ್ಡ್ ಅವರನ್ನು ಭೇಟಿಯಾದ ಬಗ್ಗೆ ಮೋದಿ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದರು.