ಪಿಎಂ ಕಿಸಾನ್ ಯೋಜನೆ ಭಾರತೀಯ ಬಡ ಮತ್ತು ಮಧ್ಯಮ ಮಟ್ಟದ ರೈತರಿಗೆ ಬಹಳ ಉಪಯುಕ್ತವಾಗಿರುವ ಯೋಜನೆಯಾಗಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ರೈತ ಯೋಜನೆಯಲ್ಲಿ ವರ್ಷಕ್ಕೆ 6 ಸಾವಿರ ರೂ ಹಣ ನೀಡುತ್ತದೆ. ಕರ್ನಾಟಕ ಸರಕಾರ ಕೂಡ 6 ಸಾವಿರ ರೂ ಒದಗಿಸುತ್ತದೆ.
ಪಿಎಂ ಕಿಸಾನ್ ಯೋಜನೆಯಲ್ಲಿ ಕೆವೈಸಿ ಭರ್ತಿ ಮಾಡಬೇಕೆಂದು ಕೇಂದ್ರ ಸರಕಾರ ಸೂಚಿಸಿತ್ತು. ಪಿಎಂ ಕಿಸಾನ್ ವೆಬ್ಸೈಟ್ಗೆ ಹೋದರೆ ಅಲ್ಲಿ ಆನ್ಲೈನ್ನಲ್ಲೇ ಕೆವೈಸಿ ಭರ್ತಿ ಮಾಡುವ ಅವಕಾಶ ಒದಗಿಸಲಾಗಿದೆ. ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಅಲ್ಲಿಯೂ ಕೆವೈಸಿ ತುಂಬಬಹುದು.
ಇ-ಕೆವೈಸಿ ಅಪ್ಡೇಟ್ ಹೇಗೆ?
ಸದ್ಯ ಕೇಂದ್ರ ಸರ್ಕಾರ ಡೆಡ್ಲೈನ್ ಘೋಷಿಸಿರುವುದು ಇ-ಕೆವೈಸಿ ಮಾಡುವಂತೆ. ಹಾಗಾಗಿ ಅದನ್ನೇ ಮೊದಲು ನೋಡೋಣ. ಈ ಕೆಳಕಂಡಂತೆ ಆನ್ಲೈನಲ್ನಲ್ಲಿ ದಾಖಲೆಗಳನ್ನು ಅಪ್ಡೇಟ್ ಮಾಡಬಹುದು.
- ಹಂತ 1: ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ಗೆ (https://pmkisan.gov.in) ಭೇಟಿ ನೀಡಿ
- ಹಂತ 2: ಇ-ಕೆವೈಸಿ (E-KYC) ಮೇಲೆ ಕ್ಲಿಕ್ ಮಾಡಬೇಕು
- ಹಂತ 3: ಆಧಾರ್ ಸಂಖ್ಯೆ ನಮೂದಿಸಬೇಕು
- ಹಂತ 4: ಆ ಬಳಿಕ ಕ್ಯಾಪ್ಚಾ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಿ
- ಹಂತ 5: ನಂತರ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ
- ಹಂತ 6: Get OTP ಕ್ಲಿಕ್ ಮಾಡಿ
- ಹಂತ 7: ನಿಮ್ಮ ಮೊಬೈಲ್ಗೆ ಬಂದ ಒಟಿಪಿ (One Time Password) ನಂಬರ್ ಅನ್ನು ನಮೂದಿಸಿ.
ವೆಬ್ಸೈಟ್ ಹೊರತುಪಡಿಸಿ ಇನ್ನೆಲ್ಲಿ ಅಪ್ಡೇಟ್ ಮಾಡಬಹುದು?
ಫಲಾನುಭವಿಗಳು ತಮ್ಮ ಆಧಾರ್ಗೆ ಸಂಖ್ಯೆ ಹಾಗೂ ಆಧಾರ್ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಓಟಿಪಿ ಮೂಲಕ ಇ-ಕೆವೈಸಿ ಅಪ್ಡೇಟ್ ಮಾಡಿಸಬಹುದು. ಪಿಎಂ ಕಿಸಾನ್ ಮೊಬೈಲ್ ತಂತ್ರಾಂಶದ ಮೂಲಕ ಫಲಾನುಭವಿಗಳೇ ತಮ್ಮ ಮುಖ ಚಹರೆ ತೋರಿಸಿ ಕೆವೈಸಿ ಅಪ್ಡೇಟ್ ಮಾಡಬಹುದು.
ಏನಿದು ಕಿಸಾನ್ ಸಮ್ಮಾನ್ ಯೋಜನೆ?
ರೈತರಿಗೆ ನಿಶ್ಚಿತ ಆದಾಯ ಕಲ್ಪಿಸುವ ಯೋಜನೆಯಾಗಿದ್ದು, ಇದರ ಫಲಾನುಭವಿಗಳಿಗೆ ಪ್ರತಿ 4 ತಿಂಗಳಿಗೊಮ್ಮೆ 2 ಸಾವಿರ ರೂಪಾಯಿ ನೀಡಲಾಗುತ್ತದೆ. ವರ್ಷದಲ್ಲಿ 3 ಬಾರಿ ಅಂದರೆ ಒಟ್ಟು 6 ಸಾವಿರ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಯೋಜನೆ 2018ರ ಡಿಸೆಂಬರ್ 1ರಿಂದ ಆರಂಭವಾಗಿದೆ. ಗಂಡ, ಹೆಂಡತಿ, ಅಪ್ರಾಪ್ತ ಮಕ್ಕಳಿರುವ ರೈತ ಕುಟುಂಬಗಳನ್ನು ಫಲಾನುಭವಿ ಕುಟುಂಬವಾಗಿ ಆಯ್ಕೆಯಾಗುತ್ತದೆ. ಈ ಯೋಜನೆಯ ಹಣವು ನೇರವಾಗಿ ಖಾತೆಗೆ ಸಂದಾಯವಾಗುತ್ತದೆ.
ನೋಂದಣಿ ಪ್ರಕ್ರಿಯೆ ಹೇಗೆ?
ಈ ಯೋಜನೆಯ ಲಾಭ ಪಡೆಯಲು ಇಚ್ಛಿಸುವ ಕುಟುಂಬವು, ತಾಲೂಕು ವ್ಯಾಪ್ತಿಗೆ ಕಂದಾಯ ಅಧಿಕಾರಿ ಅಥವಾ ಕೃಷಿ ಸಮ್ಮಾನ್ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬೇಕು. ಇವರನ್ನು ಆಯಾ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳೇ ನಿಯೋಜಿಸಿರುತ್ತವೆ. ಆ ಅಧಿಕಾರಿಗಳನ್ನು ಸಂಪರ್ಕಿಸಿ, ಸೂಕ್ತ ದಾಖಲೆ ನೀಡಿ ಈ ಯೋಜನೆಯಲ್ಲಿ ತಮ್ಮ ಹಾಗೂ ಕುಟುಂಬಸ್ಥರ ಹೆಸರುಗಳನ್ನು ನೋಂದಣಿ ಮಾಡಿಸಬೇಕು.