ಹುಬ್ಬಳ್ಳಿ: ಪೊಲೀಸ್ ಇಲಾಖೆಯಿಂದ ಸಿಬ್ಬಂದಿಗಾಗಿ ಕ್ರೀಡಾಕೂಟ ಆಯೋಜಿಸುತ್ತಿರುವುದು ಒಳ್ಳೆಯ ಕೆಲಸ, ಸಿಬ್ಬಂದಿ ಪ್ರತಿ ದಿನ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಕರ್ತವ್ಯದ ಜೊತೆಗೆ ಆರೋಗ್ಯಕ್ಕೂ ಹೆಚ್ಚು ಒತ್ತು ಕೊಡಬೇಕು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಪೊಲೀಸರಿಗೆ ಕಿವಿ ಮಾತು ಹೇಳಿದರು. ಹಳೇ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ ಘಟಕದ ವಾರ್ಷಿಕ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಲಾಯಿತು. ದೈಹಿಕವಾಗಿ ಸದೃಢವಾಗಿದ್ದರೆ ಕಚೇರಿ ಕೆಲಸದಲ್ಲಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಮಾತನಾಡಿ, ಎಲ್ಲ ಒತ್ತಡಗಳನ್ನು ಮರೆತು ಖುಷಿಯಿಂದ ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ದೈಹಿಕ ಸಾಮರ್ಥ್ಯ ಪರೀಕ್ಷೆ ಮಾಡಿಕೊಳ್ಳಲು ಇದು ಉತ್ತಮ ಅವಕಾಶ. ಪೊಲೀಸರ ಬಗೆಗಿನ ಜನರ ಭಾವನೆ ಬದಲಾಗಿದೆ. ಸಣ್ಣಪುಟ್ಟ ಅಹಿತಕರ ಘಟನೆಗಳು ಸಹ ನಡೆಯದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಸಬೇಕು ಎಂದು ಹೇಳಿದರು.
ಸಿಸೇರಿಯನ್ ಹೆರಿಗೆ ಬಳಿಕ ಬಾಣಂತಿ ಸಾವು : ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ
ಹುಡಾ ಆಯುಕ್ತ ಸಂತೋಷ ಕುಮಾರ ಬಿರಾದಾರ, ಸರ್ಕಾರಿ ನೌಕರರ ಕ್ರೀಡಾಕೂಟಗಳು ನಡೆಯುತ್ತವೆ. ಆದರೆ, ಪೊಲೀಸ್ ಕ್ರೀಡಾಕೂಟ ಶಿಸ್ತುಬದ್ಧವಾಗಿ ನಡೆಯುತ್ತದೆ. ಕೋವಿಡ್ ನಂತರ ಎಲ್ಲರೂ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಒತ್ತಡ ನಿವಾರಣೆಗೆ ಕ್ರೀಡೆ ಉತ್ತಮ ಮಾರ್ಗ. ಕ್ರೀಡಾಕೂಟ ಸಂದರ್ಭದಲ್ಲಿ ಮಾತ್ರವಲ್ಲ ಪ್ರತಿ ದಿನವೂ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು. ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಎಆರ್, ಉತ್ತರ, ದಕ್ಷಿಣ, ಮಹಿಳಾ, ಸಂಚಾರ ವಿಭಾಗದ ತಂಡಗಳು ಭಾಗವಹಿಸಿವೆ. ಕಳೆದ ಬಾರಿ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದ ವೆಂಕಟೇಶ ನಾಯ್ಕ ಅವರು ಕ್ರೀಡಾ ಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿದರು. ಆರ್ಪಿಐ ಮಾರುತಿ ಹೆಗಡೆ ಅವರ ಮುಂದಾಳತ್ವದಲ್ಲಿ ಉತ್ತರ ವಿಭಾಗ, ದಕ್ಷಿಣ ವಿಭಾಗ, ಧಾರವಾಡ ವಿಭಾಗ, ಮಹಿಳಾ ವಿಭಾಗ, ಸಂಚಾರಿ ವಿಭಾಗ ಮತ್ತು ಸಿ.ಎ.ಆರ್. ವಿಭಾಗ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು.
ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ರವೀಶ ಸಿ.ಆರ್., ಯಲ್ಲಪ್ಪ ಕಾಶಪ್ಪನವರ, ಪಿಟಿಎಸ್ ಪ್ರಾಚಾರ್ಯ ಎಂ.ಎಂ.ಯಾದವಾಡ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸಿಸಿಬಿ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಿಣೆ ಮಾಡಿದರೆ, ಡಿಸಿಪಿ ಮಹಾನಿಂಗ ನಂದಗಾವಿ ವಂದನಾರ್ಪಣೆ ಮಾಡಿದರು.