ಬಾಗಲಕೋಟೆ:- ಪಂಚಮಸಾಲಿ ಮುಖಂಡರಿಗೆ ಕಾಂಗ್ರೆಸ್ ನಿಂದ ಬೆದರಿಕೆ ಹಾಕಲಾಗುತ್ತಿದೆ ಎಂದು ಬಸವ ಜಯಮೃತ್ಯುಂಜಯ ಶ್ರೀ ಆರೋಪ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, 2ಎ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ಮಾಡುತ್ತಿರುವುದರಿಂದ ಪಂಚಮಸಾಲಿ ಸಮಾಜದ ಮುಖಂಡರಿಗೆ ಕರೆ ಮಾಡಿ ಬೆದರಿಕೆ ಹಾಕುವ ಕೆಲಸ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನಮಗೆ ಬೆದರಿಕೆ ಹಾಕುವ ಕೆಲಸ ನಡೆಯುತ್ತಿದೆ ಎಂದರು.
ಕಳೆದ 4 ದಿನಗಳಿಂದ ಪಂಚಮಸಾಲಿ ತಾಲೂಕು ಘಟಕದ ಅಧ್ಯಕ್ಷರು, ಜಿಲ್ಲಾ ಘಟಕದ ಅಧ್ಯಕ್ಷರಿಗೆ ಕರೆ ಮಾಡಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ. ಬೆದರಿಕೆ ಕರೆಗಳಿಂದ ಏನಾದರೂ ಆದರೆ ರಕ್ತ ಕ್ರಾಂತಿ ಆಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗಲೂ ಹೋರಾಟ ಮಾಡಿದ್ದೆವು. ಬೊಮ್ಮಾಯಿ ಮನೆ ಮುಂದೆಯೇ ಹೋರಾಟ ಮಾಡಿದ್ದೆವು. ಆದರೂ ನಮ್ಮ ಮೇಲೆ ಒಂದು ಕೇಸ್ ಸಹ ದಾಖಲಿಸಿರಲಿಲ್ಲ. ಆದರೆ, ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಬೆದರಿಕೆ ಹಾಕಲಾಗುತ್ತಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.