ಬಾಗಲಕೋಟೆ: ಕಳೆದೈದು ವರ್ಷಗಳಿಂದ ನಡೆಯುತ್ತಿರುವ ಬೆಳಗಾವಿ-ಬಾಗಲಕೋಟೆ ಜಿಲ್ಲೆ ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆಯಾಗಿರುವ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಜಾಕವೆಲ್ನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿಯ ವಿಳಂಬನೀತಿಗೆ ಜನತೆ ಆಕ್ರೋಶಗೊಂಡಿದ್ದು, ಶುಕ್ರವಾರ ಅಧಿಕಾರಿಗಳ ಸಭೆಯು ಕೊಂಚ ನಿರಾಳತೆ ತೋರುವಲ್ಲಿ ಕಾರಣವಾಗಿದೆ.
ಕೇವಲ ಒಂದು ಕಿ.ಮೀ.ನಷ್ಟು ಸೇತುವೆ ನಿರ್ಮಾಣಕ್ಕೆ ಐದಾರು ವರ್ಷಗಳಿಂದ ವಿಳಂಬವಾಗುತ್ತಿರುವ ಬಗ್ಗೆ ತಾಲೂಕಿನ ಜನತೆಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದ್ದರೆ, ಅಧಿಕಾರಿಗಳ ನಿರ್ಲಕ್ಷö್ಯವಂತು ಹೇಳತೀರದು. ಸೇತುವೆ ವೀಕ್ಷಣೆ ನಡೆಸಿ ಇಂದು ನಡೆದ ಮಹತ್ವದ ಸಭೆಯಲ್ಲಿ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಸುಭಾಷ ಮಾತನಾಡಿ ಭೂ ಪರಿಹಾರದಲ್ಲಿ ರೈತರಿಗೆ ಕಡಿಮೆ ಹಣ ಒದಗಿಸುತ್ತಿರುವದಾಗಿ ರೈತರು ವಿರೋಧಿಸಿದ್ದಾರೆ. ತಿಳುವಳಿಕೆ ನೋಟಿಸ್ ನೀಡಿದಾಗ್ಯೂ ಪಡೆಯದ ಕಾರಣ ಭೂಸ್ವಾಧೀನ ಅನಿವಾರ್ಯವಾಗಿದ್ದು, ಶೀಘ್ರವೇ ಕಾರ್ಯ ನಡೆಯಲಿದೆ ಎಂದರು.
ಈ ಕಾರ್ಯ ಪ್ರಕ್ರಿಯೆಗೊಂಡ ಕೆಲವೇ ದಿನಗಳಲ್ಲಿ ಸೇತುವೆ ಎರಡೂ ಬದಿಯಲ್ಲಿ ರಸ್ತೆ ನಿರ್ಮಾಣ ನಡೆಸಲಾಗುವದು. ಈಗಾಗಲೇ ಸೇತುವೆ ಕಾರ್ಯ ಶೇ.೫೦ ರಷ್ಟು ಮುಕ್ತಾಯಗೊಂಡಿದೆ. ನದಿಯಲ್ಲಿ ನೀರು ಕಡಿಮೆಯಿರುವ ಕಾರಣ ನದಿಯೊಳಗಿನ ೮ ಪಿಲ್ಲರ್ಗಳನ್ನೂ ಸಹಿತ ಪ್ರಾರಂಭಿಸಲಾಗುವದೆಂದರು. ೨೦೧೮ ರಲ್ಲಿ ಅಂದಿನ ಸಚಿವೆ ಉಮಾಶ್ರೀಯವರು ೩೦ ಕೋಟಿ ರೂ.ಗಳಷ್ಟು ಟೆಂಡರ್ ಕಾಮಗಾರಿ ಮೂಲಕ ನಾಗಾರ್ಜುನ ಕನ್ಸ್ಟ್ರಕ್ಷನ್ಕ್ಷ ಕಂಪನಿಗೆ ನೀಡಿತ್ತು.
ಕಳೆದ ಐದು ವರ್ಷಗಳಲ್ಲಿ ಕೇವಲ ಶೇ.೨೫ ರಷ್ಟು ಮಾತ್ರ ಕಾಮಗಾರಿ ನಡೆದಿದೆ. ಇದಕ್ಕೆ ಪೂರಕವಾಗಿ ೨೦೨೧ ರಲ್ಲಿ ಕಾಮಗಾರಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಹಾಲಿ ಶಾಸಕ ಸಿದ್ದು ಸವದಿ ಈ ಟೆಂಡರ್ ಕಾಮಗಾರಿಯನ್ನು ೫೦ ಕೋಟಿ ರೂ.ಗಳವರೆಗೆ ಹೆಚ್ಚಳಗೊಳಿಸುವ ಮೂಲಕ ಕಾಮಗಾರಿ ಮತ್ತಷ್ಟು ಒಳ್ಳೆಯ ಹಾಗು ವಿಸ್ತರಣೆಯಾಗಲೆಂದು ಸರ್ಕಾರದಿಂದ ಅನುಮೋದನೆ ಮಾಡಿದ್ದರು.
ಆಕ್ರೋಶ: ಕೇವಲ ೮-೧೦ ರೈತರ ಭೂಮಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಇಷ್ಟೊಂದು ವಿಳಂಬನೀತಿಯನ್ನು ಜನತೆ ವಿರೋಧಿಸಿ ಆಕ್ರೋಶ ಹೊರಹಾಕಿದರು. ಸಣ್ಣ ಸೇತುವೆ ಕಾಮಗಾರಿಯನ್ನು ನಿರ್ಲಕ್ಷ್ಯ ಮಾಡುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ. ತಕ್ಷಣವೇ ಅಧಿಕಾರಿಗಳು ಎಚ್ಛೆತ್ತು ಕಾಮಗಾರಿ ನಡೆಸಬೇಕು. ಇಲ್ಲವಾದಲ್ಲಿ ಅನಿರ್ದಿಷ್ಠಕಾಲ ಹೋರಾಟ ಅನಿವಾರ್ಯವೆಂದು ನೆರೆದಿದ್ದ ಜನತೆ ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ, ಸಿದ್ದು ಕೊಣ್ಣೂರ, ಭೀಮಶಿ ಮಗದುಮ್, ರವಿ ಜಮಖಂಡಿ, ಬಾಬಾಗೌಡ ಪಾಟೀಲ, ಗಣಪತರಾವ ಹಜಾರೆ, ರವಿ ಗಡಾದ, ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ವಿಶೇಷ ತಹಶೀಲ್ದಾರ ಎಸ್.ಬಿ. ಕಾಂಬಳೆ, ಅಧಿಕಾರಿಗಳಾದ ವೇಣುಗೋಪಾಲ, ಮುರಳಿಧರ. ರಾಮಣ್ಣ ಹುಲಕುಂದ. ನಿಲಕಂಠ ಮುತ್ತುರ. ಚಿದಾನಂದ ಗಾಳಿ. ಬಸವರಾಜ್ ತೆಗ್ಗಿ. ಸಂಜು ತೇಗ್ಗಿ. ಸೇರಿದಂತೆ ಅನೇಕರಿದ್ದರು. `ಭೂಸ್ವಾಧೀನ ಅನಿವಾರ್ಯವಾಗಿದೆ. ಶೀಘ್ರವೇ ಸೇತುವೆ ಕಾರ್ಯ ಪ್ರಾರಂಭವಾಗಲಿದೆ’.—-ಸಂತೋಷ ಕಾಮಗೊಂಡ, ಉಪವಿಭಾಗಾಧಿಕಾರಿ, ಜಮಖಂಡಿ.
ಪ್ರಕಾಶ ಕುಂಬಾರ
ಬಾಗಲಕೋಟೆ