ಬೆಂಗಳೂರು:– ನರೇಗಾ ಯೋಜನೆಯಲ್ಲಿ ಮಾನವ ದಿನಗಳನ್ನ ಹೆಚ್ಚಿಸಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬರಗಾಲವಿರುವ ಕಾರಣ ನರೇಗಾ ಯೋಜನೆಯ ಮಾನವ ದಿನಗಳನ್ನು 100 ದಿನಗಳ ಬದಲು 150 ದಿನಗಳಿಗೆ ಏರಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ” ಎಂದರು.
ಕನಕಪುರ ತಾಲೂಕಿನಲ್ಲಿ ಪ್ರತಿ ರೈತರಿಗೂ ನರೇಗಾ ಯೋಜನೆಯ ಲಾಭ ದೊರೆಯುವಂತೆ ಮಾಡಿದ್ದೇನೆ. ಸಾಕಷ್ಟು ಜನ ರೈತರು ಕೊಟ್ಟಿಗೆ ಸೇರಿದಂತೆ ಸಾಕಷ್ಟು ಅನುಕೂಲ ಮಾಡಿಕೊಂಡಿದ್ದಾರೆ. ಇದರಿಂದ ಬಿಜೆಪಿ ಸರ್ಕಾರ ನಮ್ಮ ತಾಲೂಕಿಗೆ ಉತ್ತಮವಾಗಿ ನರೇಗಾ ಯೋಜನೆ ಬಳಸಿಕೊಂಡ ತಾಲೂಕು ಎಂದು ವಿಧಿಯಿಲ್ಲದೇ ಪ್ರಶಸ್ತಿ ನೀಡಬೇಕಾಯಿತು” ಎಂದರು.
ನಾನು ರಾಜ್ಯದ ಎಲ್ಲ ಸಂಸದರಿಗೆ ಮತ್ತು ರೈತರ ಮಕ್ಕಳು ಎಂದು ಹೇಳಿಕೊಂಡು ಬಿಜೆಪಿ ಜೊತೆ ಸೇರಿರುವವರ ಬಳಿ ಕೈ ಮುಗಿದು ಕೇಳುತ್ತೇನೆ, ಇಡೀ ರಾಜ್ಯದ ಇತಿಹಾಸದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಕ್ಕೆ ತುತ್ತಾಗಿವೆ. ನರೇಗಾ ಯೋಜನೆ ಪ್ರಕಾರ ಬರಗಾಲ ಬಂದಾಗ ಮಾನವ ದಿನಗಳನ್ನು ಹೆಚ್ಚು ಮಾಡಬೇಕು ಎನ್ನುವ ಕಾನೂನಿದೆ. ಕೇಂದ್ರ ಸರ್ಕಾರಕ್ಕೆ ನೆನಪಿಸಿ, ನಮ್ಮ ರೈತರ ಬದುಕನ್ನು ಹಸನು ಮಾಡಬೇಕು” ಎಂದು ಹೇಳಿದರು.
ನೀರಿನ ಸದ್ಬಳಕೆ ಮತ್ತು ಭೂಮಿಯ ಫಲವತ್ತತೆ ಕಾಪಾಡುವ ಬಗ್ಗೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ರೈತರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ನಮ್ಮ ರಾಮನಗರದ ರೈತರಿಗಿಂತ ಈ ಭಾಗದ ರೈತರು ಚೆನ್ನಾಗಿ ಜೀವನ ಕಟ್ಟಿಕೊಂಡಿದ್ದಾರೆ. ಈ ಭಾಗದ ರೈತರು ತರಕಾರಿ, ತೋಟಗಾರಿಕಾ ಬೆಳೆ ಸೇರಿದಂತೆ ಸಿಲ್ಕ್ ಮತ್ತು ಮಿಲ್ಕ್ ಕ್ರಾಂತಿಯನ್ನು ಮಾಡಿದ್ದಾರೆ” ಎಂದರು.