ಬೆಂಗಳೂರು:– ಬಿಜೆಪಿಯ ನೂತನ ವಿಪಕ್ಷ ನಾಯಕನಾಗಿ ಆಯ್ಕೆ ಆದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಆರ್ ಅಶೋಕ್ ಸಂತಸ ಹಂಚಿಕೊಂಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತವನ್ನು ಜನರ ಮುಂದೆ ಇಡಲು ಪ್ರಯತ್ನ ಮಾಡುತ್ತೇನೆ ಎಂದರು. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಯಾವುದೇ ವಿವಾದ ಇಲ್ಲದ ಆಡಳಿತವನ್ನು ನಾವು ಕೊಡುತ್ತೇವೆ. ವಿಜಯೇಂದ್ರ ಮತ್ತು ನಾನು ಇಬ್ಬರು ಜೋಡೆತ್ತಿನಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ದೇಶದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ವಿರುದ್ಧ ಹೋರಾಟ ಮಾಡಿ ನಾನು ಜೈಲು ಸೇರಿದ್ದೆ ಎಂದು ಹೋರಾಟದ ದಿನಗಳನ್ನು ನೆನೆದ ಅಶೋಕ್, ನನ್ನನ್ನು ಆಯ್ಕೆ ಮಾಡಿದ ಪದ್ಮನಾಭನಗರದ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ, ಕಾಂಗ್ರೆಸ್ನಲ್ಲಿ ಸಿಎಂ ಹುದ್ದೆಗಾಗಿ ಪೈಪೋಟಿ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ರೈತರ ಕಷ್ಟ ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಕಾಂಗ್ರೆಸ್ ಸರ್ಕಾರ ರೈತರಿಗೆ ನಯಾ ಪೈಸೆ ಪರಿಹಾರ ಕೊಟ್ಟಿಲ್ಲ. ಕಾಂಗ್ರೆಸ್ ಕೇವಲ ದ್ವೇಷ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ದುರಾಡಳಿತವನ್ನು ಜನರ ಮುಂದೆ ಇಡಲು ಪ್ರಯತ್ನ ಮಾಡುತ್ತೇವೆ ಎಂದರು.
ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಬ್ಬರ ಮಾರ್ಗದರ್ಶನದಲ್ಲಿ ನಾವು ಮುನ್ನಡೆಯುತ್ತೇವೆ. ಸಾಮಾನ್ಯ ಕಾರ್ಯಕರ್ತನಾಗಿ ಕಳೆದ 45 ವರ್ಷದಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.
ಇನ್ನೂ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಎರಡೂ ವಿಚಾರವಾಗಿ ರಾಜ್ಯ ಬಿಜೆಪಿ ಕಳೆದ ಕೆಲವು ದಿನಗಳಿಂದ ತೀವ್ರ ವಾಗ್ದಾಳಿ ಎದುರಿಸಿದ್ದು, ಇತ್ತೀಚೆಗಷ್ಟೇ ರಾಜ್ಯಾಧ್ಯಕ್ಷರ ಆಯ್ಕೆ ಮಾಡಿದ ಬೆನ್ನಿಗೇ ಇದೀಗ ವಿಪಕ್ಷ ನಾಯಕರ ಆಯ್ಕೆ ಮಾಡಿದೆ.
ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಆರ್.ಅಶೋಕ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.