ಕೊಪ್ಪಳ:- ಆಪರೇಷನ್’ ಹಸ್ತ ಇದು ಕೇವಲ ಕಾಂಗ್ರೆಸ್ನ ನಾಟಕ ಎಂದು ಶ್ರೀರಾಮುಲು ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯಿಂದ ಹಲವು ಶಾಸಕರು ಬರುತ್ತಾರೆಂದು ಶಾಸಕ ರವಿ ಗಣಿಗರಂಥವರಿಂದ ಕಾಂಗ್ರೆಸ್ನ ಮುಖಂಡರು ಹೇಳಿಸಿ ಹೊಸ ನಾಟಕ ಶುರು ಮಾಡಿದ್ದಾರೆ ಎಂದರು.
ಕಾಂಗ್ರೆಸ್ನವರು ತಮ್ಮ ಪಕ್ಷದವರಿಂದಲೇ ಈ ರೀತಿ ಹೇಳಿಸುತ್ತಿದ್ದಾರೆ. ಅವರಿಗೆ ಬೇರೆ ವಿಷಯ ಕೇಳಬಾರದು ಎಂಬ ಕಾರಣಕ್ಕೆ ಈ ರೀತಿ ನಾಟಕ ಶುರು ಮಾಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಪಕ್ಷ ಹೊಸ ಅವಕಾಶ ಮಾಡಿಕೊಟ್ಟಿದೆ. ಅವರ ಆಯ್ಕೆ ಎಲ್ಲ ಕಾರ್ಯಕರ್ತರಲ್ಲೂ ಖುಷಿ ತರಿಸಿದೆ. ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ನಾನು ಸಹ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ಮಾಡಿದ್ದೆ. ಆದರೆ, ಪಕ್ಷಕ್ಕೆ ಯಡಿಯೂರಪ್ಪ ಕೊಡುಗೆ ದೊಡ್ಡದಿದೆ. ನನಗೆ ಸ್ಥಾನ ಸಿಕ್ಕಿಲ್ಲ ಎನ್ನುವ ಅಸಮಾಧಾನವಿಲ್ಲ. ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿದ್ದೇವೆ.
ಮಾಧ್ಯಮದಲ್ಲಿ ಹೇಳಿದ ತಕ್ಷಣ ಅಸಮಾಧಾನವಿದೆ ಎಂಬ ಭಾವನೆಯಲ್ಲ. ಪಕ್ಷದಲ್ಲಿ ಕುಳಿತು ಈ ಬಗ್ಗೆ ಚರ್ಚಿಸುತ್ತೇವೆ. ವಿರೋಧ ಪಕ್ಷದ ನಾಯಕರ ಆಯ್ಕೆ ಬೇಗ ಆಯ್ಕೆ ಆಗುತ್ತೆ ಎಂದರು.
ಸರಕಾರದ ಗ್ಯಾರಂಟಿ ಫೇಲ್ ಆಗಿದೆ. ಎಲ್ಲ ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ. ಈಗ ಗ್ಯಾರಂಟಿಗಳ ಬಗ್ಗೆ ಜನರಿಗೆ ನಂಬಿಕೆ ಇಲ್ಲ ಎಂದರಲ್ಲದೇ, ನಾನು ಬಳ್ಳಾರಿ ಲೋಕಸಭೆಯಿಂದ ಅಭ್ಯರ್ಥಿ ಆಗಲ್ಲ. ನಮ್ಮಲ್ಲಿ ನಮ್ಮ ಪಕ್ಷದ ಹಾಲಿ ಸಂಸದರಿದ್ದಾರೆ ಎಂದರು.