ಹೈದರಾಬಾದ್;- ಒಗ್ಗಟ್ಟು ಮತ್ತು ಶಿಸ್ತಿನಿಂದ ಮಾತ್ರ ವಿರೋಧಿಗಳನ್ನು ಮಣಿಸಲು ಸಾಧ್ಯ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ವೈಯಕ್ತಿಕ ಹಿತಾಸಕ್ತಿ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಯಶಸ್ಸಿಗೆ ಅವಿರತವಾಗಿ ಶ್ರಮಿಸಬೇಕಿದೆ. ಒಗ್ಗಟ್ಟು ಮತ್ತು ಶಿಸ್ತಿನಿಂದ ಮಾತ್ರ ನಾವು ನಮ್ಮ ವಿರೋಧಿಗಳನ್ನು ಮಣಿಸಬಹುದು’ ಎಂದರು.

ಶಿಸ್ತು, ಸಂಯಮ ಮತ್ತು ಒಗ್ಗಟ್ಟಿನ ಪ್ರಾಮುಖ್ಯತೆ ಕುರಿತು ಪಕ್ಷದ ಮುಖಂಡರಿಗೆ ಪಾಠ ಮಾಡಿದ್ದಾರೆ. ಈ ವೇಳೆ ಕರ್ನಾಟಕದ ವಿಧಾನಸಭಾ ಚುನಾವಣೆಯ ಗೆಲುವನ್ನು ಪ್ರಸ್ತಾಪಿಸಿದ ಖರ್ಗೆ, ‘ಒಗ್ಗಟ್ಟು ಮತ್ತು ಶಿಸ್ತಿನಿಂದಲೇ ನಾವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದೇವೆ’ ಎಂದು ಒತ್ತಿ ಹೇಳಿದರು. ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ಹಿತಾಸಕ್ತಿಗೋಸ್ಕರ ಅದನ್ನು ಬಿಡಬೇಕು. ಸ್ವಯಂ ಸಂಯಮವನ್ನು ಕಲಿಯುವುದು ಬಹಳ ಮುಖ್ಯವಾಗಿದೆ. ನಮ್ಮದೇ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಬಿಡಬೇಕಿದೆ’ ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಮುಂದೆ ಅನೇಕ ಸವಾಲುಗಳಿವೆ. ಈ ಸವಾಲುಗಳು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿಲ್ಲ. ಅವುಗಳು ಪ್ರಜಾಪ್ರಭುತ್ವದ ಉಳಿವು ಮತ್ತು ಭಾರತೀಯ ಸಂವಿಧಾನದ ಸಂರಕ್ಷಣೆಗೆ ಸಂಬಂಧಿಸಿವೆ’ ಎಂದರು.
