ಬೆಂಗಳೂರು:- ಮುಡಾ ಹಗರಣ ಟೆನ್ಷನ್ ನಡುವೆಯೂ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಸ್ಫೋಟವಾಗಿದೆ.
ವಿವಿಧ ಅಕಾಡೆಮಿ ಸದಸ್ಯರ ನೇಮಕ, ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ನೇಮಕದ ಬಗ್ಗೆ ಕಾಂಗ್ರೆಸ್ ನಲ್ಲಿ ಅಪಸ್ವರ ಎದ್ದಿದೆ. ನೇಮಕಾತಿ ಗೊಂದಲಗಳ ಬಗ್ಗೆ ರಾಹುಲ್ ಗಾಂಧಿವರೆಗೆ ದೂರು ನೀಡಲು ನಾಯಕರ ನಿರ್ಧಾರ ಮಾಡಿದ್ದಾರೆ. ನೇಮಕಾತಿಯಲ್ಲಿ ಸ್ವಜನ ಪಕ್ಷಪಾತದ ಆರೋಪ ಮಾಡುತ್ತಿರುವ ಕೈ ನಾಯಕರು, ಕೆಲವು ನಿರ್ಧಾರಗಳಲ್ಲಿ ಸಂಬಂಧಪಟ್ಟ ಸಚಿವರಿಗೇ ಮಾಹಿತಿ ನೀಡುತ್ತಿಲ್ಲ ಎಂದು ಬೇಸರದ ಜೊತೆಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.
ನಿಗಮ-ಮಂಡಳಿ ಸದಸ್ಯರ ನಿರ್ದೇಶಕರ ನೇಮಕಕ್ಕೆ ಗೃಹ ಸಚಿವ ಡಾ.ಪರಮೇಶ್ವರ ನೇತೃತ್ವದ ಸಮಿತಿ ಮಾಡಲಾಗಿದೆ. ಆದರೆ ಆ ಸಮಿತಿಯ ಗಮನಕ್ಕೂ ಬಾರದೆ ಸಿಎಂ ಕಚೇರಿಯಿಂದಲೇ ನೇರ ನೇಮಕ ಆರೋಪ ಕೇಳಿ ಬರುತ್ತಿದೆ. ಸಂಬಂಧಿಸಿದ ಇಲಾಖೆ ಸಚಿವರ ಗಮನಕ್ಕೂ ಬಾರದೆ ನೇಮಕಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.
ಕಳೆದ ಬಾರಿ ಸರ್ಕಾರದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದವರೇ ಈ ಬಾರಿಯೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಆಯಾ ಕ್ಷೇತ್ರದಲ್ಲಿ ಏನೂ ಸಾಧನೆ ಮಾಡದವರಿಗೆ ಕುರ್ಚಿ ಭಾಗ್ಯ ನೀಡಲಾಗುತ್ತಿದೆ, ಪಕ್ಷದ ಎರಡು, ಮೂರನೇ ಹಂತದ ನಾಯಕರು, ಕಾರ್ಯಕರ್ತರಿಗೆ ಅವಕಾಶ ಸಿಗುತ್ತಿಲ್ಲ. ಸಿಂಡಿಕೇಟ್ ಸದಸ್ಯ ಸ್ಥಾನ ಬಹುತೇಕ ಸಾಹಿತಿಗಳು, ಸಾಹಿತಿಗಳ ಸೋಗಿನಲ್ಲಿರುವವರಿಗೆ ಆದ್ಯತೆ ನೀಡಿರುವ ದೂರು ಕೇಳಿಬರುತ್ತಿದೆ.
ಸ್ವಪಕ್ಷಿಯರಿಗೆ ಆಯಕಟ್ಟಿನ ಹುದ್ದೆ ನೀಡುತ್ತಿರುವ ವರ್ಗಾವಣೆ ಮಾಡುತ್ತಿರುವ ಬಗ್ಗೆ ಈ ಹಿಂದೆಯೇ ಶಾಸಕ ಶಾಮನೂರು ಶಿವಶಂಕರಪ್ಪ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು. ಬಹುತೇಕ ನಾಮನಿರ್ದೇಶನದಲ್ಲಿ ವೀರಶೈವ ಲಿಂಗಾಯತರು, ಕಡೆಗಣನೆ ಬಗ್ಗೆ ಜನಾಂಗದ ಮುಖಂಡರಲ್ಲಿ ಬೇಗುದಿ ವ್ಯಕ್ತವಾಗಿತ್ತು. ವೀರಶೈವ ಲಿಂಗಾಯತರು, ಒಕ್ಕಲಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ಷೇಪವೂ ಇದೆ. ಶೈಕ್ಷಣಿಕ ವಲಯದ ಗಂಧ ಗಾಳಿ ಗೊತ್ತಿಲ್ಲದವರಿಗೂ ಮಣೆ ಹಾಕಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಗೃಹ ಸಚಿವ ಡಾ. ಜಿ.ಪರಮೇಶ್ವರ ನೇತೃತ್ವದ ಸಮಿತಿ ಗಮನಕ್ಕೂ ಬಾರದ ನೇಮಕ ಆಗಿರುವ ಬಗ್ಗೆ ಹಿರಿಯ ಸಚಿವರೇ ಬೇಸರ ವ್ಯಕ್ತಪಡಿಸಿದ್ದಾರೆ. ಡಾ.ಪರಮೇಶ್ವರ ಸಮಿತಿ ಏಕೆ ಬೇಕಿತ್ತು ಎಂದು ಕಾಂಗ್ರೆಸ್ ನಲ್ಲಿ ಪ್ರಶ್ನೆ ಎದ್ದಿದೆ.