ಬೆಂಗಳೂರು: ವಿದೇಶಗಳಿಂದ ಕಳೆದ ವಾರ ರಾಜ್ಯಕ್ಕೆ ಆಗಮಿಸಿದ 9 ಪ್ರಯಾಣಿಕರು ಹಾಗೂ ಅವರ ಕುಟುಂಬದ ಮೂವರು ಸೇರಿ 12 ಮಂದಿಯಲ್ಲಿ ಒಮಿಕ್ರೋನ್ ಸೋಂಕು ಗುರುವಾರ ದೃಢಪಟ್ಟಿದೆ. 12 ಮಂದಿಯಲ್ಲಿ ಇಬ್ಬರು ಬಾಲಕಿಯರೂ ಇದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈ ರೂಪಾಂತರಿ ಸೋಂಕಿತರ ಒಟ್ಟು ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಡಿ.18ರಂದು ಒಂದೇ ದಿನ 6 ಪ್ರಕರಣ ಪತ್ತೆಯಾಗಿದ್ದು ಈವರೆಗಿನ ಗರಿಷ್ಠ ಆಗಿತ್ತು. ಇದೀಗ ಒಂದೇ ದಿನ ಅದರ ದುಪ್ಪಟ್ಟು ಪ್ರಕರಣಗಳು ದೃಢಪಟ್ಟಿದೆ. ಹೈರಿಸ್ಕ್ ದೇಶಗಳಿಂದ ರಾಜ್ಯಕ್ಕೆ ಬಂದವರು ಮತ್ತು ಅವರ ಸಂಪರ್ಕಿತ ಸ್ಥಳೀಯರಲ್ಲಿ ಒಮಿಕ್ರೋನ್ ಸೋಂಕು ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಡಿ.17ರಂದು ಲಂಡನ್‌ನಿಂದ ಬೆಂಗಳೂರಿಗೆ ಬಂದ ಐದು ಪ್ರಯಾಣಿಕರು (12 ವರ್ಷದ ಬಾಲಕಿ ಸೇರಿ), ಡೆನ್ಮಾರ್ಕ್ ಮತ್ತು ನೈಜೀರಿಯಾದಿಂದ ಬೆಂಗಳೂರಿಗೆ ಬಂದ ತಲಾ ಒಬ್ಬರು ವಯಸ್ಕರು, ಸ್ವಿಜರ್ಲೆಂಡ್‌ನಿಂದ ಮೈಸೂರಿಗೆ ಬಂದ 9 ವರ್ಷದ ಮಗು ಹಾಗೂ ಘಾನಾದಿಂದ ಮಂಗಳೂರಿಗೆ ಬಂದಿದ್ದ ಒಬ್ಬರಲ್ಲಿ ರೂಪಾಂತರಿ ದೃಢಪಟ್ಟಿದೆ. ಜತೆಗೆ ವಿದೇಶದಿಂದ ಬಂದ ಸೋಂಕಿತರೊಬ್ಬರ ಕುಟುಂಬದ ಮೂರು ಮಂದಿಯಲ್ಲಿ ಒಮಿಕ್ರೋನ್ ಪತ್ತೆಯಾಗಿದೆ.

ಡಿ.1ರಿಂದ 22ವರೆಗೂ 6 ವಿದೇಶಿ ಪ್ರಯಾಣಿಕರು, 13 ಸ್ಥಳೀಯರು ಸೇರಿ 19 ಮಂದಿಯಲ್ಲಿ ಒಮಿಕ್ರೋನ್ ಪತ್ತೆಯಾಗಿತ್ತು. ವಿದೇಶದಿಂದ ಬಂದವರಿಗಿಂತ ಸ್ಥಳೀಯರಲ್ಲೇ ರೂಪಾಂತರಿ ಹೆಚ್ಚು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಆದರೆ, ಕಳೆದ ಒಂದು ವಾರದಿಂದ ವಿದೇಶದಿಂದ ಬರುತ್ತಿರುವವರಲ್ಲಿ ಕೊರೋನಾ ಹೆಚ್ಚು ಪತ್ತೆಯಾಗುತ್ತಿದೆ. ಅವರೆಲ್ಲರನ್ನು ವಂಶವಾಹಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹಲವರಲ್ಲಿ ಒಮಿಕ್ರೋನ್ ಕಾಣಿಸಿಕೊಳ್ಳುತ್ತಿದೆ.