ಬೆಂಗಳೂರು:- ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ ಹಾಗೂ ಒಕ್ಕಲಿಗ ನಾಯಕರಾದ ಆರ್‌ ಅಶೋಕ್‌ ಅವರನ್ನ ವಿರೋಧ ಪಕ್ಷದ ನಾಯಕನನ್ನಾಗಿ ಬಿಜೆಪಿ ಆಯ್ಕೆ ಮಾಡಿದ್ದು, ಉತ್ತರ ಕರ್ನಾಟಕ ಭಾಗ ಬಿಜೆಪಿ ನಾಯಕರು ಅಸಮಾಧಾನವನ್ನ ವ್ಯಕ್ಯಪಡಿಸಿದ್ದಾರೆ,

ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಕಮಲ ಪಾಳಯದ ಹಲವು ನಾಯಕರು ಅಸಮಾಧಾನಗೊಂಡಿದ್ರು, ಇದೀಗ ವಿಪಕ್ಷ ಸ್ಥಾನಕ್ಕಾಗಿ ಉತ್ತರ ಕರ್ನಾಟಕದ ಹಲವು ನಾಯಕರು ಬೇಡಿಕೆ ಇಟ್ಟಿದ್ದು, ಆರ್‌ ಅಶೋಕ್‌ ಅವರಿಗೆ ವಿಪಕ್ಷ ಸ್ಥಾನವನ್ನ ನೀಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ರಾತ್ರಿ ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಮುನಿಸಿಕೊಂಡು ತೆರಳಿದ್ದ ಶಾಸಕ ರಮೇಶ್​​ ಜಾರಕಿಹೊಳಿ ಇದೀಗ ಪಕ್ಷದ ರಾಜ್ಯ ಘಟದ ಅಧ್ಯಕ್ಷರ ನೇಮಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕಾಂಗ ಸಭೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ಬಸವನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ್‌ ಬೆಲ್ಲದ್‌ ಸಭೆ ಸೇರಿದ್ದು, ಉತ್ತರಕರ್ನಾಟ ಭಾಗದವರಿಗೆ ವಿಪಕ್ಷ ಸ್ಥಾನ ಸಿಗುವ ಕುರಿತು ಚರ್ಚೆ ನಡೆದಿದೆ. ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಕ್ಕೆ ರಮೇಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರದ ವೀಕ್ಷಕರ ಎದುರು ತಮ್ಮ ಬೇಗುದಿ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉತ್ತರ ಕರ್ನಾಟಕದವರನ್ನೇ ಪರಿಗಣಿಸಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೊಂದರೆಯಾಗಲಿದೆ. ಪಕ್ಷಕ್ಕೆ ಮೊದಲಿನಿಂದಲೂ ಗಟ್ಟಿಯಾಗಿ ಬೆಂಬಲಿಸಿಕೊಂಡು ಬಂದಿರುವ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಬೇಕು ಎಂದು ಶಾಸಕಾಂಗ ಸಭೆಗೂ ಮುನ್ನ ಉತ್ತರ ಕರ್ನಾಟಕ ಭಾಗದ ನಾಯಕರು ಹೇಳಿದ್ದಾರೆ. ಅಲ್ಲದೆ, ವಿಜಯೇಂದ್ರ ನೇಮಕಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಶಾಸಕಾಂಗ ಸಭೆಯ ಹಿನ್ನೆಲೆ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪಕ್ಷದ ನಾಯಕ ದುಷ್ಯಂತ್ ಅವರು ಭೇಟಿ ವೇಳೆಯೂ ಉತ್ತರ ಕರ್ನಾಟಕ ಭಾಗದ ನಾಯಕರಾದ ಬಸವನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ರಮೇಶ್‌ ಜಾರಕಿಹೊಳಿ ವಿಜಯೇಂದ್ರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದರು.

ಈಗಾಗಲೇ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಆಯ್ಕೆ ಕುರಿತು ಹಲವು ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ರಾಜ್ಯಾಧ್ಯಕ್ಷರ ಆಯ್ಕೆ ಮತ್ತು ವಿಪಕ್ಷ ನಾಯಕನ ಆಯ್ಕೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share.