ದುಬೈ : ಕರ್ನಾಟಕದಿಂದ ಹೊರಗೆ ವಾಸಿಸುತ್ತಿರುವ ಹಾಗೂ ಕರ್ನಾಟಕದ ಬಗ್ಗೆ ಕಾಳಜಿ ಹೊಂದಿರುವ ಅನಿವಾಸಿ ಕನ್ನಡಿಗರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಕೋರಿ ವಿಶ್ವಾದ್ಯಂತ ಟ್ವೀಟರ್ ಅಭಿಯಾನ ನಡೆಸಿದರು. ಜನವರಿ 2ನೇ ತಾರೀಖನ್ನು ‘ಎನ್‌ಆರ್‌ಐ ಅಪೀಲ್ ಡೇ’ ಎಂದು ಆಚರಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಅಂತಾ ರಾಷ್ಟ್ರೀಯ ಕನ್ನಡಿಗರ ಒಕ್ಕೂಟವು ಟ್ವೀಟರ್ ಅಭಿಯಾನ ನಡೆಸಿತು. ಭಾರತೀಯ ಕಾಲಮಾನ ಸಂಜೆ 3 ಗಂಟೆಗೆ ಆರಂಭವಾದ ಅಭಿಯಾನಕ್ಕೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು,
ಸುಮಾರು 20 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳಾಗಿವೆ. ದುಬೈನಲ್ಲಿ ನೆಲೆಸಿರುವ ಹಿದಾಯತ್ ಅಡ್ಡೂರ್ ನೇತೃತ್ವದಲ್ಲಿ ಅಭಿಯಾನ ನಡೆಯಿತು. 30ಕ್ಕೂ ಹೆಚ್ಚು ದೇಶದಿಂದ ಟ್ವೀಟ್: ಎನ್‌ಆರ್‌ಐ ಫೋರಂಗೆ ಉಪಾಧ್ಯಕ್ಷರನ್ನು ನೇಮಕ ಮಾಡಬೇಕು ಎಂಬುದೂ ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಸರ್ಕಾರದ ಗಮನ ಸೆಳೆಯಲು ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ 30ಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷವೂ ಜ.2ರಂದು ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಆದರೆ ಬೇಡಿಕೆಗಳು ಈಡೇರದ ಪರಿಣಾಮ ಮತ್ತೊಮ್ಮೆ ಟ್ವೀಟರ್ ಅಭಿಯಾನ ಆರಂಭಿಸಿದ್ದಾರೆ.

13 ವರ್ಷಗಳ ಹಿಂದೆ ಅನಿವಾಸಿ ಕನ್ನಡಿಗರಿಗೆಂದೇ ಸ್ಥಾಪಿತವಾದ ಕನ್ನಡಿಗರ ಅನಿವಾಸಿ ಭಾರತೀಯ ಸಮಿತಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಅವರಿಗೆ ಬಿಡುವಿಲ್ಲದ ಕಾರಣದಿಂದ ಈ ಸಮಿತಿಯ ಕಾರ್ಯಕಲಾಪಗಳನ್ನು ನೋಡಿಕೊಳ್ಳುವ ಜವಬ್ದಾರಿಯನ್ನು ಉಪಾಧ್ಯಕ್ಷರಿಗೆ ನೀಡಲಾಗಿದೆ. ಆದರೆ ಕಳೆದ 4 ವರ್ಷಗಳಿಂದ ಉಪಾಧ್ಯಕ್ಷರ ನೇಮಕವೇ ಆಗಿಲ್ಲ. ಉಪಾಧ್ಯಕ್ಷರನ್ನು ನೇಮಿಸಬೇಕೆಂಬುದು ಅನಿವಾಸಿ ಕನ್ನಡಿಗರ ಬೇಡಿಕೆಯಾಗಿದೆ.