ಬೆಂಗಳೂರು : ಡಿ.ಕೆ. ಶಿವಕುಮಾರ್ ಅವರಿಗೆ ಈಗ ಗೋಲ್ಡನ್ ಆಪರ್ಚುನಿಟಿ ಇದೆ. ಡಿಕೆಶಿ ಅವರು ತಾವು ಸತ್ಯಹರಿಶ್ಚಂದ್ರರು ಅಂತ ಸಾಬೀತು ಮಾಡುವ ಅವಕಾಶ ಇದೆ. ಜನತೆಯ ಮುಂದೆ ನೀವು ತಪ್ಪು ಮಾಡಿಲ್ಲ ಅಂತ ತನಿಖೆ ಎದುರಿಸಿ ತೋರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲೆಸೆದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅಕ್ರಮ ಆಸ್ತಿ ಗಳಿಕೆ ಪ್ರಕರಣ. ಈ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಣಯ ಸಂಪೂರ್ಣ ಕಾನೂನು ಬಾಹಿರ ಎಂದು ಕಿಡಿಕಾರಿದ್ದಾರೆ.
ಐಟಿ ದಾಳಿ ಆದಾಗ ರಾಜ್ಯ ಮತ್ತು ಬೇರೆ ಬೇರೆ ಭಾಗಗಳಲ್ಲಿ ಸಾಕಷ್ಟು ಹಣ ಸೀಜ್ ಆಯ್ತು. ಇನ್ನೂ ಐಟಿ ತನಿಖೆಯೂ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ದುರಾದೃಷ್ಟಕರ. ಸರ್ಕಾರ ಕಾನೂನಿಗೆ ವಿರುದ್ಧವಾಗಿ ಈ ನಿರ್ಣಯ ಕೈಗೊಂಡಿದೆ. ಡಿಕೆಶಿಯವರನ್ನು ಉಳಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಡಿಕೆಶಿ ಅವರಿಗೆ ಕಾನೂನಿನ ಭಯ ಇದೆಯಾ? ಮೊದಲು ಡಿಕೆಶಿ ಅವರೇ ಸರ್ಕಾರದ ನಿರ್ಧಾರ ವಿರೋಧಿಸಬೇಕಿತ್ತು. ಎಲ್ಲೋ ಒಂದು ಕಡೆ ಡಿಕೆಶಿ ತಪ್ಪು ಮಾಡಿದ್ದಾರೆ ಅಂತ ಅವರೇ ಒಪ್ಪಿಕೊಂಡಂತೆ ಆಗಿದೆ ಎಂದು ಚಾಟಿ ಬೀಸಿದ್ದಾರೆ.