ಇಂಗು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡಿಬಿಡುತ್ತದೆ ಎಂಬ ಮಾತಿನಂತೆ ನಾವು ತಯಾರು ಮಾಡುವ ಅಡುಗೆಗಳ ರುಚಿ ನಮ್ಮ ನಾಲಿಗೆಗೆ ಮತ್ತು ಅದರ ಸುವಾಸನೆ ಪಕ್ಕದ ಮನೆಯವರ ಮೂಗಿಗೆ ಬಡಿಯಬೇಕೆಂದರೆ ನಮ್ಮ ಅಡುಗೆಗಳ ರುಚಿ ಹೆಚ್ಚು ಮಾಡುವ ಎಲ್ಲಾ ಪದಾರ್ಥಗಳನ್ನು ಮಿಸ್ ಮಾಡದಂತೆ ಬಳಕೆ ಮಾಡಲೇಬೇಕು.
ಅದು ಸಿಹಿ ಅಡುಗೆ ಆದರೂ ಸರಿ ಅಥವಾ ಖಾರದ ಅಡುಗೆ ಆದರೂ ಪರವಾಗಿಲ್ಲ. ಖಾರದ ಅಡುಗೆ ಪದಾರ್ಥಗಳು ಬೆಳಗಿನ ತಿಂಡಿಗಳು ಅಥವಾ ಮಧ್ಯಾಹ್ನದ ಊಟಕ್ಕೆ ಸಂಬಂಧ ಪಟ್ಟ ಯಾವುದೇ ಆಹಾರಗಳಿಗೆ ಶುಂಠಿ ಮತ್ತು ಬೆಳ್ಳುಳ್ಳಿ ಬಳಕೆ ಮಾಡಿಯೇ ಮಾಡುತ್ತೇವೆ
ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಇಲ್ಲದೆ ಅಡುಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇವು ಆಹಾರಗಳಿಗೆ ರುಚಿ ನೀಡುವಲ್ಲಿ ಪ್ರಮುಖವಾಗಿವೆ. ಆದರೆ ಇವುಗಳನ್ನು ಬಳಸುವುದು ಅಷ್ಟು ಸುಲಭವಲ್ಲ. ಸಿಪ್ಪೆ ತೆಗೆದು ಸ್ವಚ್ಛಗೊಳಿಸುವಷ್ಟರಲ್ಲಿ ಸ್ವಲ್ಪ ಸಮಯ ಬೇಕಾಗುತ್ತದೆ. ಈರುಳ್ಳಿ ಕತ್ತರಿಸುವಾಗ ಅನೇಕರು ಕಣ್ಣೀರು ಸುರಿಸುತ್ತಾರೆ. ಅದೇ ರೀತಿ ಬೆಳ್ಳುಳ್ಳಿ, ಶುಂಠಿ ಇವುಗಳ ಸಿಪ್ಪೆ ತೆಗೆಯಲು ಕಷ್ಟವಾಗುತ್ತದೆ. ಆದರೆ ಇನ್ನು ಮುಂದೆ ಸಿಪ್ಪೆ ತೆಗೆಯಲು ಕಷ್ಟಪಡಬೇಕಾಗಿಲ್ಲ. ಈ ರೀತಿ ನೀವು ಒಮ್ಮೆ ಮಾಡಿ ನೋಡಿ.
ಮೊದಲು ಈರುಳ್ಳಿಯ ಎರಡೂ ತುದಿಗಳನ್ನು ಕತ್ತರಿಸಿ ತೆಗೆಯಬೇಕು. ಕೈಯಿಂದಲೇ ಸಿಪ್ಪೆ ತೆಗೆಯಬಹುದು. ನಂತರ ಸಿಪ್ಪೆ ತೆಗೆದ ಈರುಳ್ಳಿಯನ್ನು ಕತ್ತರಿಸುವ ಮೊದಲು ಫ್ರೀಜರ್ನಲ್ಲಿ ಸ್ವಲ್ಪ ಸಮಯ ಇಡಬಹುದು. ನಂತರ ಸ್ವಲ್ಪ ನೀರನ್ನು ತೆಗೆದುಕೊಂಡು ಅದರಲ್ಲಿ ಈರುಳ್ಳಿಯನ್ನು ಮುಳುಗಿಸಿಡಿ. ಸುಮಾರು 15 ನಿಮಿಷಗಳ ಕಾಲ ಹಾಗೆಯೇ ಇಟ್ಟ ನಂತರ ಕತ್ತರಿಸಬಹುದು. ಇದು ಈರುಳ್ಳಿಯಲ್ಲಿರುವ ತೀಕ್ಷ್ಣ ವಾಸನೆಯನ್ನು ಹೋಗಲಾಡಿಸುತ್ತದೆ. ಆದ್ದರಿಂದ ನೀವು ಅಳಬೇಕಾಗಿಲ್ಲ.
ಶುಂಠಿ
ಚಮಚವನ್ನು ಬಳಸಿ ಶುಂಠಿಯ ಗಟ್ಟಿಯಾದ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು. ಸಿಪ್ಪೆ ತೆಗೆಯಲು ಚಾಕುವನ್ನು ಬಳಸುವ ಬದಲು ಮೊನಚಾದ ಚಮಚವನ್ನು ಬಳಸಬಹುದು. ಇದು ಹೆಚ್ಚು ಸಮಯ ತೆಗೆದುಕೊಳ್ಳದೆ ಶುಂಠಿಯ ಸಿಪ್ಪೆ ತೆಗೆಯಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿ:
ಅಂಟಿಕೊಳ್ಳುವುದರಿಂದ ಬೆಳ್ಳುಳ್ಳಿಯ ಸಿಪ್ಪೆ ತೆಗೆಯಲು ಸ್ವಲ್ಪ ಕಷ್ಟವಾಗುತ್ತದೆ. ಆದ್ದರಿಂದ ಸಿಪ್ಪೆ ಕೈಗೆ ಅಂಟಿಕೊಳ್ಳದಂತೆ ತಡೆಯಲು ಸ್ವಲ್ಪ ಆಲಿವ್ ಎಣ್ಣೆಯನ್ನು ಕೈಗೆ ಅಥವಾ ಚಾಕುವಿಗೆ ಹಚ್ಚಿಕೊಳ್ಳಿ. ಹೀಗೆ ಮಾಡಿದರೆ ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.