ಪಣಜಿ: ಮುಂಬರುವ ಗೋವಾ ವಿಧಾನಸಭೆ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ತಂತ್ರಗಾರಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ, ಈ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವನ್ನು ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್ ಗೆ ಮಾತ್ರ ಎಂದಿದ್ದಾರೆ. ಆಪ್ ಹಾಗೂ ಟಿಎಂಸಿ ಪಕ್ಷಗಳು ಗೋವಾದಲ್ಲಿ ಬಿಜೆಪಿಯೇತರ ಮತಗಳನ್ನು ಒಡೆಯುತ್ತಿವೆ ಎಂದು ಕಿಡಿಕಾರಿದ್ದಾರೆ.
ಮುಂಬರುವ ಗೋವಾ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿರುವ ಪಿ.ಚಿದಂಬರಂ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ,
ಆಪ್ ಹಾಗೂ ಟಿಎಂಸಿ ಪಕ್ಷದ ತಂತ್ರಗಾರಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್ ಗೆ ಮಾತ್ರ. ಅದು ಸಾಕಷ್ಟು ಬಾರಿ ಸಾಬೀತು ಕೂಡ ಆಗಿದೆ. ಆದರೆ, ಈ ಬಾರಿ ಆಪ್ ಹಾಗೂ ಟಿಎಂಸಿ ಕಣಕ್ಕಿಳಿದಿರುವುದರಿಂದ ಬಿಜೆಪಿಯೇತರ ಮತಗಳೇ ಛಿದ್ರವಾಗಲಿದೆ ಎಂದು ಹೇಳಿದ್ದಾರೆ. “ಗೋವಾದ ಎಲ್ಲಾ 40 ವಿಧಾನಸಭಾ ಕ್ಷೇತ್ರಗಳಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್. ಹಣಬಲ ಹಹಾಗೂ ಅಧಿಕಾರದ ದುರುಪಯೋಗ ಮಾಡಿಕೊಂಡ ಹೊರತಾಗಿಯೂ ಬಿಜೆಪಿಯನ್ನು ಈ ರಾಜ್ಯದಲ್ಲಿ ಸೋಲಿಸುವ ಶಕ್ತಿ ಕಾಂಗ್ರೆಸ್ ಗೆ ಮಾತ್ರ ಇದೆ ಎನ್ನುವುದು ಇಲ್ಲಿನ ಜನರಿಗೂ ತಿಳಿದಿದೆ ಎಂದು ಚಿದಂಬರಂ ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿ ಟಿಎಂಸಿಗೆ ಸೇರುತ್ತಿರುವ ಬಗ್ಗೆ ಮಾತನಾಡಿದ ಚಿದಂಬರಂ, ಯಾವುದೇ ಪಕ್ಷದ ಉದ್ದೇಶದ ಕುರಿತಾಗಿ ನಾನಿಲ್ಲಿ ಮಾತನಾಡಲು ಬಂದಿಲ್ಲ. ನನಗೆ ತಿಳಿದಿರುವ ಮಟ್ಟಿಗೆ ಇಬ್ಬರು ಕಾಂಗ್ರೆಸ್ ಶಾಸಕದು ಮಾತ್ರವೇ ರಾಜೀನಾಮೆ ನೀಡಿ ಟಿಎಂಸಿ ಪಕ್ಷ ಸೇರಿದ್ದಾರೆ ಎಂದರು. “ಶೇ.99ರಷ್ಟು ಕಾರ್ಯಕರ್ತರು ಇಂದಿಗೂ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ. ರೆಗಿನಾಲ್ಡೋ ಲಾರೆನ್ಸೋ ನಮ್ಮ ಪಕ್ಷವನ್ನು ತೊರೆದು ಟಿಎಂಸಿ ಸೇರಿದ್ದಕ್ಕೆ ಬೇಸರವಾಗಿಲ್ಲ. ನಮ್ಮಲ್ಲಿದ್ದ ಸೋಲುವ ಅಭ್ಯರ್ಥಿಯನ್ನು ಅವರು ತೆಗೆದುಕೊಂಡಿದ್ದಾರೆ. ಟಿಎಂಸಿಯಿಂದ ಕಣಕ್ಕಿಳಿದರೂ ಅವರು ಸೋಲು ಕಾಣುವುದು ಖಂಡಿತ’ ಎಂದು ಹೇಳಿದ್ದಾರೆ.