ಬೆಂಗಳೂರು: ದೇಶ ಸುತ್ತಿ ನೋಡು ಕೋಶ ಓದಿ ನೋಡು ಅಂತಾರೆ. ಕೋಶ ಓದಲು ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಆದರೆ ದೇಶ ಸುತ್ತಬೇಕು ಎಂದರೆ ನಿಮ್ಮ ಜೇಬು ಕೂಡ ಅಷ್ಟೇ ಗಟ್ಟಿ ಇರಬೇಕು. ಹಾಗಂತ ಎಲ್ಲಾ ಪ್ರವಾಸಗಳು ದುಬಾರಿಯೇ ಇರುತ್ತದೆ ಎಂದು ಹೇಳಲಾಗದು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಬೆಳೆಸುವ ಮುನ್ನ ನಮ್ಮ ಬಳಿ ವೀಸಾ ಇರಲೇಬೇಕು. ಆದರೆ ಲೇಖನದಲ್ಲಿ ಹೇಳಲಾಗುವ ಈ ದೇಶಗಳಿಗೆ ನೀವು ವೀಸಾ ಇಲ್ಲದೆಯೇ ಪ್ರಯಾಣ ಮಾಡಬಹುದು.
ವೀಸಾ ಅವಶ್ಯಕತೆ ಇಲ್ಲದೆ ಭಾರತೀಯರು ಪ್ರವಾಸ ಕೈಗೊಳ್ಳಬಹುದಾದ ಕೆಲವು ರಾಷ್ಟ್ರಗಳು:
ಮಾರಿಷನ್: ನೀವು ವೀಸಾ ಅಗತ್ಯವಿಲ್ಲದೆ ಗರಿಷ್ಟ 90 ದಿನಗಳವರೆಗೆ ಮಾರಿಷನ್ ನಲ್ಲಿ ಉಳಿಯಬಹುದು. ಇದು ಭಾರತೀಯರಿಗೆ ಅತ್ಯಂತ ಸ್ನೇಹಪರ ರಾಷ್ಟ್ರಗಳಲ್ಲಿ ಒಂದಾಗಿದೆ. ಇದೊಂದು ದ್ವೀಪರಾಷ್ಟ್ರವಾಗಿದ್ದು, ಇಲ್ಲಿಯ ಪ್ರಕೃತಿಯ ಸೌಂದರ್ಯವನ್ನು ಸವಿಯಲು, ಸಾಹಸಿಮಯ ಜಲಕ್ರೀಡೆಗಳನ್ನು ಆಡಲು ನೀವು ಇಲ್ಲಿಗೆ ಪ್ರವಾಸ ಕೈಗೊಳ್ಳಬಹುದು.
ನೇಪಾಳ: ನೇಪಾಳವು ಭಾರತೀಯರಿಗೆ ವಿಸಾ ಮುಕ್ತ ಪ್ರಯಾಣವನ್ನು ಅನುಮತಿಸುವ ಮತ್ತೊಂದು ರಾಷ್ಟçವಾಗಿದೆ. ನೇಪಾಳವು ಭವ್ಯವಾದ ಹಿಮಾಲಯ ಶಿಖರಗಳು, ಆಧ್ಯಾತ್ಮಿಕ ದೇವಾಲಯಗಳು ಮತ್ತು ಶ್ರೀಮಂತ ಪರಂಪರೆಗೆ ಹೆಸರುವಾಸಿಯಾದ ದೇಶವಾಗಿದೆ. ಇದು ಪ್ರಸಿದ್ಧ ಎವರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಕಿಂಗ್ ಸೇರಿದಂತೆ ವಿವಿಧ ಟ್ರೆಕ್ಕಿಂಗ್ ಗೆ ಉತ್ತಮ ಸ್ಥಳವಾಗಿದೆ. ಈ ರಾಷ್ಟ್ರಗಳು ಮಾತ್ರವಲ್ಲದೆ ಮಾಲ್ಡೀವ್ಸ್, ಕಾಂಬೋಡಿಯಾ, ಥೈಲ್ಯಾಂಡ್, ಶ್ರೀಲಂಕಾ, ಟ್ರಿನಿಡಾಡ್ ಮತ್ತು ಟೊಬಾಗೊ ಸೇರಿದಂತೆ ಇನ್ನೂ ಅನೇಕ ದೇಶಗಳಿಗೆ ಭಾರತೀಯರು ವೀಸಾದ ಅಗತ್ಯವಿಲ್ಲದೆ ಪ್ರವಾಸ ಹೋಗಬಹುದು.
ಬಾರ್ಬಡೋಸ್: ಬಾರ್ಬಡೋಸ್ ಅತ್ಯಂತ ಸುಂದರವಾದ ಕೆರಬಿಯನ್ ರಾಷ್ಟ್ರಗಳಲ್ಲಿ ಒಂದಾಗಿದೆ. ಉಷ್ಣವಲಯದ ದ್ವೀಪದ ವಿಹಾರಕ್ಕೆ ಉತ್ಸುಕರಾಗಿರುವವರಿಗೆ ಈ ಸ್ಥಳ ಉತ್ತಮವಾಗಿದೆ. ಈ ದೇಶ ಸುಂದರವಾದ ಕಡಲತೀರಗಳು, ಸ್ಫಟಿಕ ಸ್ಪಷ್ಟ ನೀರು ಮತ್ತು ರೋಮಾಂಚಕ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರವಾಸಿಗರು ಜಲ ಕ್ರೀಡೆಗಳನ್ನು ಆನಂದಿಸಬಹುದು, ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸಬಹುದು. ಹಾಗೂ ಇನ್ನಿತರ ಅತ್ಯಂತ ಸುಂದರವಾದ ಪ್ರದೇಶಗಳಿಗೆ ನೀವಿಲ್ಲಿ ಭೇಟಿ ನೀಡಬಹುದು. ಬಾರ್ಬಡೋಸ್ ಭಾರತೀಯರಿಗೆ ವೀಸಾ ಮುಕ್ತವಾಗಿದೆ. ನೀವು ನಿರಂತರ 90 ದಿನಗಳವರೆಗೆ ಇಲ್ಲಿ ವೀಸಾ ಇಲ್ಲದೆ ಪ್ರವಾಸ ಕೈಗೊಳ್ಳಬಹುದು.
ಭೂತಾನ್: ಒಂದು ಪುಟ್ಟ ಅಂತರಾಷ್ಟ್ರೀಯ ಪ್ರವಾಸ ಕೈಗೊಳ್ಳಬೇಕು ಎಂದಿದ್ದರೆ ನೀವು ಭೂತಾನ್ ದೇಶಕ್ಕೆ ಭೇಟಿ ನೀಡಬಹುದು. ನಿಮ್ಮ ಭೇಟಿ 14 ದಿನಗಳನ್ನು ಮೀರದಿದ್ದರೆ ನೀವು ವೀಸಾದ ಅಗತ್ಯವಿಲ್ಲದೆ ಭೂತಾನ್ ಗೆ ಪ್ರಯಾಣಿಸಬಹುದು. ಇದು ಭಾರತದ ನೆರೆಯ ಅತ್ಯಂತ ಸುಂದರವಾದ ರಾಷ್ಟ್ರವಾಗಿದೆ. ಇದು ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳಲ್ಲಿ ಒಂದಾಗಿದೆ, ಇಲ್ಲಿ ನೀವು ಅನೇಕ ಪ್ರವಾಸಿ ತಾಣಗಳನ್ನು ಅನ್ವೇಷಿಸಬಹುದು.
ಇಂಡೋನೇಷ್ಯಾ: ಇಂಡೋನೇಷ್ಯಾ ತನ್ನ ನೈಸರ್ಗಿಕ ಸೌಂದರ್ಯ, ಪ್ರಾಚೀನ ದೇವಾಲಯಗಳು ಮತ್ತು ಉತ್ತಮ ಆತಿಥ್ಯಕ್ಕೆ ಹೆಸರುವಾಸಿಯಾದ ವೈವಿಧ್ಯಮಯ ದೇಶವಾಗಿದೆ. ಇಲ್ಲಿ ನೀವು ವೀಸಾ ಇಲ್ಲದೆ 30 ದಿನಗಳ ಕಾಲ ಉಳಿದುಕೊಳ್ಳಬಹುದು. ಇದು ಬಾಲಿಯ ರೈಸ್ ಟೆರೇಸ್ ಗಳು ಮತ್ತು ಕೊಮೊಡೊ ನ್ಯಾಷನಲ್ ಪಾರ್ಕ್ನಂತಹ ಸಾಂಪ್ರದಾಯಿಕ ತಾಣಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ ಇಲ್ಲಿ ಅನೇಕ ಪ್ರಾಕೃತಿಕ ತಾಣಗಳಿವೆ.
ಜಮೈಕಾ: ಜಮೈಕಾ ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ಮುಕ್ತ ಪ್ರಯಾಣವನ್ನು ಅನುಮತಿಸುವ ಮತ್ತೊಂದು ದೇಶವಾಗಿದೆ. ಈ ದೇಶ ಬಿಳಿ ಮರಳಿನಿಂದ ಹಾಗೂ ಸ್ಫಟಿಕಸ್ಪಷ್ಟ ನೀರಿನಿಂದ ಕೂಡಿದ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ನೀವು ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್, ಸರ್ಫಿಂಗ್ ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಅಲ್ಲದೆ ಈ ದೇಶ ಪ್ರಕೃತಿಪ್ರೇಮಿಗಳಿಗೆ ಸ್ವರ್ಗವಾಗಿ.
ಫಿಜಿ: ವೀಸಾ ಅಗತ್ಯವಿಲ್ಲದೆ ನೀವು 120 ದಿನಗಳವರೆಗೆ ಫಿಜಿ ರಾಷ್ಟ್ರದ ಪ್ರವಾಸ ಕೈಗೊಳ್ಳಬಹುದು. ಫಿಜಿಯು ಉಷ್ಣವಲಯದ ಸ್ವರ್ಗವಾಗಿದ್ದು, ದಕ್ಷಿಣ ಫೆಸಿಪಿಕ್ನಲ್ಲಿ ನೆಲೆಯಾಗಿದೆ. ಸುಂದರವಾದ ಭೂದೃಶ್ಯಗಳು, ಪ್ರಾಚೀನ ಕಡಲತೀರಗಳ ಸೌಂದರ್ಯವನ್ನು ಇಲ್ಲಿ ಸವಿಯಬಹುದು. ಇಲ್ಲಿ ಟ್ರೆಕ್ಕಿಂಗ್, ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್ ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಬಹುದು.
ಸೇಂಟ್ ಕಿಟ್ಸ್ ಮತ್ತು ನೆವಿಸ್: ನಿಮ್ಮ ಭೇಟಿಯು 90 ದಿನಗಳನ್ನು ಮೀರದಿದ್ದರೆ ವೀಸಾ ಅಗತ್ಯವಿಲ್ಲದೆ ನೀವು ಸುಂದರವಾದ ಸೇಂಟ್ ಕಿಟ್ಸ್ ಮತ್ತು ನೆವಿಸ್ ದ್ವೀಪವನ್ನು ಅನ್ವೇಷಿಸಬಹುದು. ಈ ಅವಳಿ ದ್ವೀಪ ರಾಷ್ಟ್ರವು ಪ್ರಪಂಚದ ಕೆಲವು ಸುಂದರ ಕಡಲತೀರಗಳಿಗೆ ನೆಲೆಯಾಗಿದೆ. ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್ ಮತ್ತು ಇನ್ನಿತರ ಹೊರಾಂಗಣ ಸಾಹಸಮಯ ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಬಹುದು.
ಸೇಂಟ್ ವಿನ್ಸೆಂಟ್ ಮತ್ತು ಗ್ರೆನೆಡೈನ್: ವೀಸಾ ಅಗತ್ಯವಿಲ್ಲದೆ 30 ದಿನಗಳವರೆಗೆ ಭಾರತೀಯರು ಈ ಸುಂದರ ದ್ವೀಪ ರಾಷ್ಟ್ರಕ್ಕೆ ಪ್ರವಾಸ ಕೈಗೊಳ್ಳಬಹುದು. ಈ ಸ್ಥಳ ಬಿಳಿ ಮರಳು ಹಾಗೂ ಸ್ಫಟಿಕ್ ಸ್ಪಷ್ಟ ನೀರಿನಿಂದ ಕೂಡಿದ ಮರಳುಗಾಡು, ಸೊಂಪಾದ ಮಳೆಕಾಡುಗಳು ಮತ್ತು ಪರ್ವತ ಶ್ರೇಣಿಗಳಿಗೆ ಹೆಸರುವಾಸಿಯಾಗಿದೆ ಪರಿಸರ ಪ್ರೇಮಿಗಳಿಗೆ ಪ್ರವಾಸ ಹೋಗಲು ಇದು ಉತ್ತಮ ಸ್ಥಳಗಳಲ್ಲಿ ಒಂದಾಗಿದೆ.