ಬೆಂಗಳೂರು: ಸರ್ಕಾರಿ ನೌಕರರಿಗೆ ನ್ಯಾಯಯುತವಾಗಿ ವೇತನ ಪರಿಷ್ಕರಣೆ ಮಾಡಲು ವೇತನ ಆಯೋಗ ರಚಿಸಿ ಮಧ್ಯಂತರ ಪರಿಹಾರ ನೀಡಲಾಗುತ್ತಿದೆ. ಆದರೆ ಈ ಸರ್ಕಾರ ಕುಂಟು ನೆಪ ಹೇಳಿ ವೇತನ ಆಯೋಗದ ಅವಧಿ ವಿಸ್ತರಿಸಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಿಡಿ ಕಾರಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರದ ಬಳಿ ಬರ ಎದುರಿಸಲು, ಗ್ಯಾರಂಟಿಗಳ ಜಾರಿಗೆ ಹಣ ಇಲ್ಲ. ಸರ್ಕಾರಿ ನೌಕಕರರಿಗೆ ವೇತನ ಪಾವತಿಸಲೂ ಹಣ ಇಲ್ಲ. ಸರ್ಕಾರ ಒಂದು ರೀತಿಯಲ್ಲಿ ದಿವಾಳಿಯಾಗಿದೆ. ನಮ್ಮ ಸರ್ಕಾರ ಇದ್ದಾಗ ದೇಶದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯ ನಮ್ಮದಾಗಿತ್ತು ಎಂದರು.
ಈಗ ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಎಲ್ಲ ರಂಗಗಳಲ್ಲೂ ಕಾಂಗ್ರೆಸ್ ವಿಫಲವಾಗಿದೆ. ಈ ಸರ್ಕಾರ ಬದುಕಿದ್ದೂ ಸತ್ತಂತೆ ಆಗಿದೆ. ಕುಂಟು ನೆಪ ಹೇಳಿಕೊಂಡು ಕಾಂಗ್ರೆಸ್ನವರು ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೇ ಬಿಡಲು ಆಗಲ್ಲ. ನಮ್ಮೆಲ್ಲಾ ಮುಖಂಡರೂ ಚರ್ಚೆ ಮಾಡಿ ಇದೆಲ್ಲದರ ವಿರುದ್ಧ ಹೋರಾಟ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.