ಮಂಡ್ಯ:- 45 ನೌಕರರನ್ನು ವಜಾ ಮಾಡಿದ ಹಿನ್ನೆಲೆ ನಿರಾಣಿ ಶುಗರ್ಸ್ ಕಂಪನಿಯ ನೌಕರ ಚಿಮಿನಿ ಏರಿದ ಘಟನೆ ಜರುಗಿದೆ.
ಕಂಪನಿಯ ನಿರ್ಧಾರ ಖಂಡಿಸಿ ಕಾರ್ಖಾನೆಯ ಚಿಮಿನಿ ಏರಿರುವ ಕಾರ್ಮಿಕ ಮತ್ತೆ ಕೆಲಸಕ್ಕೆ ಸೇರಿಕೊಳ್ಳುವಂತೆ ವಿನೂತನ ಪ್ರತಿಭಟನೆ ಮಾಡ್ತಿದ್ದಾನೆ. ಆತನನ್ನು ಕೆಳಗಿಳಿಸಲು ಅಧಿಕಾರಿಗಳು ಹಾಗೂ ಕಾರ್ಖಾನೆ ಸಿಬ್ಬಂದಿ ಹರಸಾಹಸ ಪಡ್ತಿದ್ದಾರೆ.
ಚಿಮಿನಿ ಏರಿ ಕುಳಿತ ವ್ಯಕ್ತಿ, ಆ ವ್ಯಕ್ತಿ ಕೆಳಗಿಳಿಸಲು ಪ್ರಯತ್ನಿಸುತ್ತಿರುವ ಜನರು. ಈ ದೃಶ್ಯ ಕಂಡು ಬಂದದ್ದು, ಮಂಡ್ಯದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ. ಕೆಲಸದಿಂದ ವಜಾಗೊಳಿಸಿದ್ರು ಅನ್ನೋ ಕಾರಣಕ್ಕೆ ಚಿಮಿನಿ ಏರಿದ್ದ ನೊಂದ ಕಾರ್ಮಿಕ ರಾಮಕೃಷ್ಣ ಆಡಳಿತ ಮಂಡಳಿಯ ನಿರ್ಧಾರವನ್ನು ವಿನೂತನವಾಗಿ ಖಂಡಿಸಿದ್ರು.
ಅಂದಹಾಗೇ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಒಂದು ಕಾಲದಲ್ಲಿ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿತ್ತು. ಕಳೆದ 5 ವರ್ಷಗಳ ಹಿಂದೆ ಅಂದಿನ ಸರ್ಕಾರ ನಷ್ಟದ ಕಾರಣ ಹೇಳಿ ಮುರುಗೇಶ್ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ಸಂಸ್ಥೆಗೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿತ್ತು. ಗುತ್ತಿಗೆ ಕರಾರು ವೇಳೆ PSSK ನೌಕರರನ್ನ ಮುಂದುವರಿಸುವಂತೆ ಹಾಗೂ ನೌಕರರು ಒಪ್ಪಿದ್ದಲ್ಲಿ VRS ನೀಡುವಂತೆ ಸೂಚಿಸಲಾಗಿತ್ತು. ಆರಂಭದಲ್ಲಿ ನಿಯಮ ಪಾಲಿಸುವುದಾಗಿ ಹೇಳಿದ್ದ ನಿರಾಣಿ ಶುಗರ್ಸ್ನವರು ಕಾಲ ಕಳೆದಂತೆ ಒಂದೊಂದೇ ಒಪ್ಪಂದಗಳನ್ನ ಬ್ರೇಕ್ ಮಾಡ್ತಾ ಬರ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕಳೆದ ಹತ್ತಾರು ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ 45 ಜನ ನೌಕರರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿದೆ.