ಮುಂಬೈನ ವಾಂಖೆಡೆ ಮೈದಾನದಲ್ಲಿ ನಾಳೆ ಸೆಮಿಫೈನಲ್ ಮುಖಾಮುಖಿಯಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ಆಡಿದ ಎಲ್ಲ ಒಂಬತ್ತು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಅಜೇಯ ಓಟ ಮುಂದುವರಿಸುವ ತವಕದಲ್ಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಾಯಕ ರೋಹಿತ್ ಶರ್ಮಾ, ಹಿಂದಿನ ಫಲಿತಾಂಶಗಳ ಬಗ್ಗೆ ಯೋಚಿಸದೇ ಸೆಮಿಫೈನಲ್ ಪಂದ್ಯದ ಮೇಲೆ ಗಮನ ಕೇಂದ್ರಿಕರಿಸಬೇಕಿದೆ ಎಂದು ಹೇಳಿದ್ದಾರೆ.
ನಾವು ಮೊದಲ ವಿಶ್ವಕಪ್ (1983) ಗೆದ್ದಾಗ ತಂಡದಲ್ಲಿರುವ ಹೆಚ್ಚಿನವರು ಹುಟ್ಟಿರಲಿಲ್ಲ. ಕಳೆದ ಬಾರಿ ಗೆದ್ದಾಗಲೂ (2011) ಹೆಚ್ಚಿನವರು ಕ್ರಿಕೆಟ್ ಆಡುತ್ತಿರಲಿಲ್ಲ. ಹಿಂದೆ ಏನಾಯಿತು ಎಂಬುದು ನಮಗೆಲ್ಲರಿಗೂ ಗೊತ್ತಿದೆ. 10 ವರ್ಷ ಅಥವಾ ಕಳೆದ ವಿಶ್ವಕಪ್ನಲ್ಲಿ ಏನಾಯಿತು ಎಂಬುದರ ಕುರಿತು ಚರ್ಚಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇನ್ನೊಂದು ತಂಡದಿಂದ ಉಂಟಾಗುವ ಒತ್ತಡ ಅಥವಾ ಸವಾಲುಗಳ ಬದಲು ಪಂದ್ಯದ ಮೇಲೆ ಗಮನ ಕೇಂದ್ರಿಕರಿಸುವುದು ಮುಖ್ಯವೆನಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಲೀಗ್ ಪಂದ್ಯವಾಗಿರಲಿ, ಸೆಮಿಫೈನಲ್ ಅಥವಾ ಫೈನಲ್ ಪಂದ್ಯವೇ ಆಗಿರಲಿ. ಒತ್ತಡ ಯಾವಾಗಲೂ ಇರುತ್ತದೆ. ಮೊದಲ ಪಂದ್ಯದಿಂದ ಕೊನೆಯವರೆಗೂ ನಾವು ಒತ್ತಡವನ್ನು ಚೆನ್ನಾಗಿ ನಿಭಾಯಿಸಿದ್ದೇವೆ ಎಂದು ಅವರು ಹೇಳಿದರು.