ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಸಾಕಷ್ಟು ವಿವಾದದ ಮೂಲಕ ತೆರೆಗೆ ಬಂದಿದೆ. ಆರಂಭದಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದ ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ಘಳಿಕೆಯಲ್ಲಿ ಹಿಂದೇಟು ಹಾಕಿದೆ. ಇದೇ ಕಾರಣಕ್ಕೆ ಚಿತ್ರತಂಡ ಥಿಯೇಟರ್ ಗೆ ಪ್ರೇಕ್ಷಕರನ್ನು ಸೆಳೆಯಲು ಹೊಸ ತಂತ್ರ ಆಯೋಜಿಸಿದೆ.
ಆದಿಪುರುಷ್ ಸಿನಿಮಾ ನೋಡಲು ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಫ್ಯಾಮಿಲಿ ಆಡಿಯನ್ಸ್ ಥಿಯೇಟರ್ ಕಡೆ ಮುಖ ಹಾಕಲು ಹಿಂಜರಿಯುತ್ತಿದ್ದಾರೆ. ಇದೇ ಕಾರಣಕ್ಕೆ ಆದಿಪುರುಷ್ ಸಿನಿಮಾ ತಂಡ ಟಿಕೇಟ್ ದರವನ್ನು ಕಡಿಮೆ ಮಾಡಿದೆ.

ಪಿವಿಆರ್, ಐನಾಕ್ಸ್, ಸಿನೆಪೊಲೀಸ್ ಇತರೆ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಕೇವಲ 150 ರುಪಾಯಿಗೆ 3ಡಿಯಲ್ಲಿ ಆದಿಪುರುಷ್ ಸಿನಿಮಾ ನೋಡಬಹುದಾಗಿದೆ. ಆದರೆ ಈ ಆಫರ್ ಕೇವಲ ಎರಡು ದಿನದ್ದು ಮಾತ್ರವಾಗಿದೆ.ನಿನ್ನೆ ಹಾಗೂ ಇಂದು 150 ರುಪಾಯಿಗೆ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾವನ್ನು ನೋಡಬಹುದಾಗಿದೆ. ಅದಾದ ಬಳಿಕ ದರ ತುಸು ಹೆಚ್ಚಾಗಲಿದೆ. ಸಿನಿಮಾದ ನಾಯಕಿ ಕೃತಿ ಸೆನನ್ ಸೇರಿದಂತೆ ಹಲವರು ಚಿತ್ರತಂಡ ನೀಡಿರುವ ಈ ಆಫರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ಕೆಲವು ದೃಶ್ಯಗಳು ಹಾಗೂ ಸಂಭಾಷಣೆಗಳನ್ನು ಬದಲಿಸಿರುವುದಾಗಿಯೂ ಚಿತ್ರತಂಡ ಹೇಳಿಕೊಂಡಿದೆ.
ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಆದಿಪುರುಷ್ ಸಿನಿಮಾದ 3ಡಿ ಪ್ರದರ್ಶನದ ಟಿಕೆಟ್ 180 ರಿಂದ ಪ್ರಾರಂಭವಾಗಿ 400 ರವರೆಗೂ ಇದೆ. ತೀರ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಮಾತ್ರವೇ 150 ರುಪಾಯಿ ಬೆಲೆಯ ಟಿಕೆಟ್ ಇಂದು ಲಭ್ಯವಾಗುತ್ತಿದೆ. ಈ ಸಿನಿಮಾ ಬಿಡುಗಡೆ ಆದ ದಿನ ಟಿಕೆಟ್ ಬೆಲೆ ಗಗನದಲ್ಲಿತ್ತು, ದುಬಾರಿ ಟಿಕೆಟ್ ಬೆಲೆಯಿಂದ ಸಹ ಕುಟುಂಬಗಳು ಚಿತ್ರಮಂದಿರದಿಂದ ದೂರವೇ ಉಳಿದಿದ್ದವು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಇಂಥದೊಂದು ಕ್ರಮಕ್ಕೆ ಮುಂದಾಗಿದೆ.
