ಟೊಮೆಟೋ ಬೆಲೆಯನ್ನು ಹತೋಟಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಮಹಾ ಒಕ್ಕೂಟ (ಎನ್ಸಿಸಿಎಫ್) ಸಬ್ಸಿಡಿ ದರದಲ್ಲಿ ಟೊಮೆಟೋ ಮಾರಲಿದೆ. ಮೊದಲಿಗೆ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎನ್ಸಿಸಿಎಫ್ನ ರೀಟೇಲ್ ಸ್ಟೋರ್ ಮತ್ತು ವಾಹನಗಳ ಮೂಲಕ ಟೊಮೆಟೋ ಮಾರಾಟ ನಡೆಯಲಿದೆ. ಕಿಲೋಗೆ 60 ರೂಗೆ ಈ ಹಣ್ಣು ಸಿಗಲಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದರು.
ದೇಶದ ಹಲವೆಡೆ ಟೊಮೆಟೋ ಬೆಲೆ 70 ರೂಗಿಂತ ಮೇಲೇರಿದೆ. ದೆಹಲಿ ಮೊದಲಾದ ಕೆಲವೆಡೆಯಂತೆ ಬೆಲೆ 120 ರೂವರೆಗೂ ಹೋಗಿದೆ. ಹಣದುಬ್ಬರ ಇಳಿಸುವ ಗುರಿಗೆ ಇದು ತಡೆಯಾಗುವುದರಿಂದ ಸರ್ಕಾರ ಈ ಬೆಲೆ ಏರಿಕೆಗೆ ಕಡಿವಾಣ ಹಾಕುವುದು ಅನಿವಾರ್ಯ. ಕೇಂದ್ರ ಸರ್ಕಾರ ಸ್ಥಾಪಿಸಿರುವ ಬೆಲೆ ಸ್ಥಿರತೆ ನಿಧಿಯನ್ನು (ಪಿಎಸ್ಎಫ್) ಬಳಸಿ ಮಂಡಿಗಳಿಂದ ಟೊಮೆಟೋ ಖರೀದಿಸಿ ವಿವಿಧ ಕಡೆ ಮಾರಾಟ ಮಾಡುವ ಪ್ರಯತ್ನ ಮಾಡಲಾಗಿದೆ.
ಈ ಹಿಂದೆಯೂ ಈರುಳ್ಳಿ, ಆಲೂಗಡ್ಡೆ ಇತ್ಯಾದಿ ಆಹಾರವಸ್ತುಗಳ ಬೆಲೆ ಏರಿಕೆಯಾದಾಗ ಸರ್ಕಾರದಿಂದಲೇ ಅವುಗಳನ್ನು ಅಗತ್ಯ ಇರುವೆಡೆ ಮಾರುವ ಕೆಲಸ ಮಾಡಲಾಗುತ್ತಿದೆ. ಅನಗತ್ಯವಾಗಿ ಇವುಗಳ ಕೊರತೆಯಿಂದ ಬೆಲೆ ಏರಿಕೆ ಸೃಷ್ಟಿಯಾಗುವುದನ್ನು ತಪ್ಪಿಸಲು ಸರ್ಕಾರ ಇಂಥ ಕ್ರಮ ಕೈಗೊಳ್ಳುತ್ತದೆ.