ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಜಾವೆಲಿನ್ ಎಸೆತದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದು ಭಾರತವೇ ಹೆಮ್ಮೆ ಪಡುವಂತೆ ಮಾಡಿದ್ದ ನೀರಜ್ ಚೋಪ್ರಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಸಾಧನೆ ಶಿಖರ ಏರಿದ ಬಂಗಾರದ ಹುಡುಗ 24ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಸರೋಜಾ ದೇವಿ-ಸತೀಶ್ ಕುಮಾರ್ ಅವರ ಮಗನಾಗಿ 1997ರ ಡಿಸೆಂಬರ್ 24ರಂದು ಹರ್ಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಖಾಂಡ್ರಾ ಗ್ರಾಮದಲ್ಲಿ ಜನಿಸಿದ ನೀರಜ್, ತಮ್ಮ ಕಲಿಕೆಯನ್ನು ಚಂಡೀಗಢದಲ್ಲಿ ಪೂರೈಸಿದರು. ಬಳಿಕ 2016ರಲ್ಲಿ ಜೂನಿಯರ್ ಕಮಿಷನ್ ಅಧಿಕಾರಿಯಾಗಿ, ಸುಬೇದಾರ್ ರ್ಯಾಂಕ್ನೊಂದಿಗೆ ಭಾರತೀಯ ಸೇನೆ ಸೇರಿದರು.
ಟೋಕಿಯೋ ಒಲಿಂಪಿಕ್ಸ್ನ ಜಾವಲಿನ್ ಥ್ರೋ ವಿಭಾಗದಲ್ಲಿ 87.58 ಮೀಟರ್ ದೂರಕ್ಕೆ ಜಾವಲಿನ್ ಎಸೆದು ಚಿನ್ನದ ಪದಕ ಪಡೆದಿದ್ದಾರೆ. ಇದರೊಂದಿಗೆ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಪದಕ ಪಡೆದ ಮೊದಲ ಆಟಗಾರ ಎನಿಸಿದ್ದಾರೆ. ಅಲ್ಲದೆ, 2017ರ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದರು. 2018ರ ಏಷ್ಯನ್ ಗೇಮ್ಸ್‌ನಲ್ಲಿ ಕೂಡ ಚಿನ್ನದ ಪದಕ ಗೆದ್ದಿದ್ದರು. ಚೋಪ್ರಾ 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಚಿನ್ನದ ಪದಕ ಪಡೆದಿದ್ದರು. ಇತ್ತೀಚೆಗೆ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರು ನೀರಜ್ ಚೋಪ್ರಾಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
