ಬೆಂಗಳೂರು:-ನಕ್ಸಲೀಯರು ಮುಖ್ಯವಾಹಿನಿಗೆ ಬರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದ ಎಲ್ಲಾ ನಕ್ಸಲೀಯರು ಸಂಪೂರ್ಣವಾಗಿ ಶರಣಾಗತರಾಗಿ ಮುಖ್ಯವಾಹಿನಿಗೆ ಬರಲು ನಮ್ಮ ಸರ್ಕಾರವು ಬಯಸುತ್ತದೆ ಎಂದರು.
ನಕ್ಸಲೀಯರು ಚಟುವಟಿಕೆಗಳಲ್ಲಿ ತೊಡಗಿರುವವರು ಶರಣಾಗಿ ಮುಖ್ಯವಾಹಿನಿಗೆ ಬರಬೇಕೆಂದು ಸರ್ಕಾರವು ಬಯಸುತ್ತದೆ. ಈ ಮಧ್ಯೆ ನಕ್ಸಲೀಯರು ಪ್ರಜಾತಾಂತ್ರಿಕತೆಯ ಮುಖ್ಯವಾಹಿನಿಗೆ ಬರಬೇಕೆಂದು ಪ್ರತಿಪಾದಿಸುವ ಹಾಗೂ ಜೀವಹಾನಿಯು ಯಾವ ಕಡೆಯು ನಡೆಯಬಾರದು ಎಂದು ಬಯಸುವ ವಿವಿಧ ಪ್ರಗತಿಪರ ಹಾಗೂ ಜನಪರ ವೇದಿಕೆಗಳ ಹಲವಾರು ಮುಖಂಡರು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಶಾಂತಿ ನೆಲೆಸುವಂತೆ ಮಾಡಲು ಸರ್ಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ. ಆದರೆ ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮಾತುಕತೆ ನಡೆಸಲು ಮುಂದಾಗಿದ್ದರೆ, ಈ ಪ್ರಕ್ರಿಯೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸಿ, ಸಹಾನುಭೂತಿಯಿಂದ ನಡೆದುಕೊಳ್ಳುತ್ತದೆ.
ಮಲೆನಾಡಿನಲ್ಲಿ ಎರಡು ದಶಕಗಳಿಂದ ಆಗಾಗ ನಕ್ಸಲೀಯ ಚಟುವಟಿಕೆಗಳು ಕಾಣುತ್ತಲಿವೆ ಮತ್ತು ಆ ಕಾರಣದಿಂದ ಹಿಂಸೆ ಹಾಗೂ ಸಾವು-ನೋವುಗಳು ಸಂಭವಿಸಿವೆ. ಹಲವಾರು ಅಮಾಯಕರ, ಪೊಲೀಸರ ಮತ್ತು ನಕ್ಸಲೀಯ ಚಟುವಟಿಕೆಗಳಲ್ಲಿ ಇದ್ದವರ ಜೀವಹಾನಿಯೂ ಆಗಿದೆ ಆದರೆ, ಪ್ರಜಾತಾಂತ್ರಿಕ ಸಮಾಜದಲ್ಲಿ ಬಂದೂಕಿನ ಮೂಲಕ ಬದಲಾವಣೆ ತರಲು ಹೊರಟಿರುವ ಆದರ್ಶವಾದಿಗಳು ತಮ್ಮ ಜೀವವನ್ನೂ ತೆತ್ತುಕೊಳ್ಳುತ್ತಾರೆ ಇತರರ ಜೀವಹಾನಿಗೂ ಕಾರಣವಾಗುತ್ತಾರೆ ಎಂದಿದ್ದಾರೆ.
ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮುಂದಾದ್ದಲ್ಲಿ ಶರಣಾಗತಿ ಕುರಿತು ಈಗಾಗಲೇ ಸರ್ಕಾರವು ನೀತಿಯನ್ನು ರೂಪಿಸಿದ್ದು, ಈ ನೀತಿಯನ್ನು ಸರಳೀಕರಣಗೊಳಿಸಿ, ಸಮಪರ್ಕವಾಗಿ ಜಾರಿ ಮಾಡಲಾಗುವುದೆಂದು ಭರವಸೆ ನೀಡಿದ್ದಾರೆ.