ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಹಾಯ್ ನಾನ್ನ ಸಿನಿಮಾ ಇದೇ ಡಿಸೆಂಬರ್ 7ರಂದು ಪಂಚ ಭಾಷೆಯಲ್ಲಿ ರಿಲೀಸ್ ಆಗ್ತಿದೆ. ಈ ಹಿನ್ನೆಲೆ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಚಾರ ನಡೆಸುತ್ತಿರುವ ನಾನಿ ಇಂದು ಬೆಂಗಳೂರಿನಲ್ಲಿ ತಮ್ಮ ಚಿತ್ರದ ಪ್ರಮೋಷನ್ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಗೂ ಮುನ್ನ ಅವರು, ನಾಗವಾರದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆಗೆ ಭೇಟೆ ಕೊಟ್ಟು ಒಂದಷ್ಟು ಅವರ ಮನೆಯಲ್ಲಿ ಬ್ರೇಕ್ ಫಾಸ್ಟ್ ಸವಿದು ಕೆಲ ಕಾಲ ಸಮಯ ಕಳೆದಿದ್ದಾರೆ.ಶಿವಣ್ಣನ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ನಾನಿ ಸಿನಿಮಾ ಬಗ್ಗೆ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.
ನ್ಯಾಚುರಲ್ ಸ್ಟಾರ್ ನಾನಿ ಮಾತನಾಡಿ, ನನ್ನ ಹಿಂದಿನ ಸಿನಿಮಾ ದಸರಾಗೆ ನೀವು ಬೆಂಬಲ ಕೊಟ್ಟಿದ್ದೀರಾ. ಅದೇ ರೀತಿ ಹಾಯ್ ನಾನ್ನ ಚಿತ್ರಕ್ಕೂ ಸಪೋರ್ಟ್ ಮಾಡಿ. ಹಾಯ್ ನಾನ್ನ ಎಂದು ಕನ್ನಡದಲ್ಲಿ ಟೈಟಲ್ ಇಡಲು ಕಾರಣವೇನೆಂದರೆ, ಸೌತ್ ಇಂಡಸ್ಟ್ರೀಯ ಎಲ್ಲಾ ಭಾಷೆಯಲ್ಲಿಯೂ ಇದೆ ಟೈಟಲ್ ಇಡಲಾಗಿದೆ. ರಿವ್ಯೂ ಮಾಡಲು, ಬುಕ್ ಮೈಶೋನಲ್ಲಿ ಸಿನಿಮಾ ಹೆಸರು ಸರ್ಚ್ ಮಾಡಲು ಸುಲಭವಾಗಲಿದೆ ಎಂದು. ಹಿಂದಿಯಲ್ಲಿ ಹಾಯ್ ನಾನ್ನ ಎಂದು ಇಡಲು ಆಗುವುದಿಲ್ಲ. ನಾನ್ನ ಎಂದರೆ ತಾತ ಎಂದಾಗುತ್ತದೆ. ಹೀಗಾಗಿ ಹಿಂದಿಯಲ್ಲಿ ಹಾಯ್ ಪಾಪ್ಪ ಎಂದು ಇಡಲಾಗಿದೆ. ನನ್ನ ಕರಿಯರ್ ನ ಒಂದೊಳ್ಳೆ ಅದ್ಭುತ ಸಿನಿಮಾವಾಗಿದೆ ಎಂದು ತಿಳಿಸಿದರು.
‘ದಸರಾ’ ಚಿತ್ರದಲ್ಲಿ ಮಾಸ್ ಆಗಿ ಮಿಂಚಿದ್ದ ನಾನಿ ಈ ಚಿತ್ರದಲ್ಲಿ ಸಖತ್ ಕ್ಲಾಸ್ ಆಗಿ ಕಾಣಿಕೊಂಡಿದ್ದಾರೆ. ಚಿತ್ರದಲ್ಲಿ ನಾನಿ ಮಗಳ ಪಾತ್ರದಲ್ಲಿ ಹಿಂದಿ ಬಾಲನಟಿ ಬೇಬಿ ಕಿಯಾರಾ ಖನ್ನಾ ನಟಿಸಿದ್ದಾಳೆ. ನಾನಿಗೆ ಜೋಡಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ಅಲ್ಲದೇ ವಿಶೇಷ ಪಾತ್ರದಲ್ಲಿ ಶ್ರುತಿ ಹಾಸನ್ ಮಿಂಚಲಿದ್ದು. ಜಯರಾಮ್ ಮತ್ತು ಪ್ರಿಯದರ್ಶಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೈರ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮೋಹನ್ ಚೆರುಕೂರಿ, ವಿಜಯೇಂದ್ರ ರೆಡ್ಡಿ ತೀಗಲ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಸಾನು ಜಾನ್ ವರ್ಗೀಸ್ ಐಎಸ್ಸಿ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ. ಪಂಚಭಾಷೆಗಳಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ದಕ್ಷಿಣ ರಾಜ್ಯಗಳ ಜನರಿಗೆ ತಲುಪುವ ಸಲುವಾಗಿ ಒಂದೇ ಟೈಟಲ್ ಇರಲಿ ಎಂದು ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ ‘ಹಾಯ್ ನಾನ್ನ’ ಎಂದೇ ಶೀರ್ಷಿಕೆ ಇಡಲಾಗಿದೆ. ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದೊಂದಿಗೆ ಆರಂಭವಾಗಿರುವ ಈ ಸಿನಿಮಾ ಡಿಸೆಂಬರ್ 7ರಂದು ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಹಾಯ್ ನಾನ್ನ ಸಿನಿಮಾವನ್ನು ಶಾಲಿನಿ ಆರ್ಟ್ಸ್ ರಿಲೀಸ್ ಮಾಡುತ್ತಿದೆ.