ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಂಕರ ಮಠದ ಸ್ವಾಮಿ ವಿವೇಕಾನಂದ ಉದ್ಯಾನವನದಲ್ಲಿ ರಾಷ್ಟ್ರೀಯ ಯುವದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕ್ಷೇತ್ರದ ಶಾಸಕ ಹಾಗೂ ಸಚಿವ ಕೆ ಗೋಪಾಲಯ್ಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿವೇಕಾನಂದರ ತತ್ವ ಆದರ್ಶಗಳನ್ನು ಯುವಜನತೆ ಮೈಗೊಡಿಕೊಳ್ಳಬೇಕು. ಅವರು ಹಾಕಿಕೊಟ್ಟ ಸನ್ಮಾರ್ಗಗಳು, ತೋರಿಸಿಕೊಟ್ಟ ಬೆಳಕಿನ ಹಾದಿ ನಮ್ಮೆಲ್ಲರಿಗೂ ದಾರಿದೀಪವಾಗಬೇಕು ಎಂದು ಹೇಳಿದರು.
ಬಳಿಕ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ 3 ನೇ ಅಲೆಯ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಕಳೆದ 10 ದಿನಗಳಿಂದ ಬೆಂಗಳೂರು ಸೇರಿದಂತೆ ದೇಶಾದ್ಯಂತ ಕೋವಿಡ್ ಹೆಚ್ಚಾಗುತ್ತಿದ್ದು, ಕ್ಷೇತ್ರದಲ್ಲಿ ಕಂಟ್ರೋಲ್ ರೂಂ ಶನಿವಾರದಿಂದ ಆರಂಭವಾಗಲಿದೆ. ಕ್ಷೇತ್ರದ ಯಾರಿಗೆ ಆಗಲಿ ಕೋವಿಡ್ ಬಂದಾಗ ಸಹಾಯ ವಾಣಿಗೆ ಕರೆ ಮಾಡಿದರೆ ಅರ್ಧ ಗಂಟೆಯಲ್ಲಿ ಅಗತ್ಯವಾದ ವೈದ್ಯಕೀಯ ನೆರವು ನೀಡಲಾಗುವುದು ಎಂದು ಹೇಳಿದರು. ಅಲ್ಲದೇ ಕೊರೊನಾ ಬಗ್ಗೆ ಅಸಡ್ಡೆ ತೋರದೆ ಮುಂಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದ್ದರು.
