ರಾಮನಗರ: ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡಲು ಸೂಕ್ತ ಸಮಯವಲ್ಲ ಎಂದು ಹೇಳಿಕೆ ನೀಡಿದ ಆರೋಗ್ಯ ಸಚಿವರಿಗೆ ಡಿ.ಕೆ ಸುರೇಶ್, ದೇಶದಲ್ಲಿ ಕೊರೊನಾ ಹೆಚ್ಚಾಗಲು ಮೋದಿ ರ‍್ಯಾಲಿ ಕಾರಣ ಎಂದು ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯ ವಿಚಾರವಾಗಿ ಡಾ.ಕೆ ಸುಧಾಕರ್, ಈ ಪಾದಯಾತ್ರೆ ಮಾಡಲು ಇದು ಸೂಕ್ತ ಸಮಯವಲ್ಲ. ಕೊರೊನಾ ವೇಗವಾಗಿ ಹರಡುತ್ತಿದೆ.
ಕೊರೊನಾ ಕೇಸ್ ಹೆಚ್ಚಾದ್ರೆ ಕಾಂಗ್ರೆಸ್ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಸುಧಾಕರ್ ಅವರು ಮೋದಿಯವರಿಗೆ ಹೇಳಿ ಭಾರತೀಯ ಜನತಾ ಪಕ್ಷದವರು ನಡೆಸುತ್ತಿರುವಂತಹ ಎಲ್ಲಾ ರ‍್ಯಾಲಿಯನ್ನು ನಿಲ್ಲಿಸಬೇಕು. ಏಕೆಂದರೆ ಓಮಿಕ್ರಾನ್ ಬಿಜೆಪಿಯವರ ರ‍್ಯಾಲಿಯಿಂದಲೇ ಜಾಸ್ತಿಯಾಗುತ್ತಿದೆ ಎಂದು ತಿರುಗೇಟು ನೀಡಿದರು.

ನೀವು ನಾವು ಹೇಳಿದ ಮಾತನ್ನು ಕೇಳಿದರೆ ನಾವು ನೀವು ಹೇಳಿದಂತಹ ಮಾತನ್ನು ಕೇಳುತ್ತೇವೆ. ಹಾಗೆಯೇ ದೇಶದಲ್ಲಿ ಕೊರೊನಾ ಹೆಚ್ಚಲು ಮೋದಿ ರ್ಯಾಲಿಯೆ ಮುಖ್ಯ ಕಾರಣವಾಗಿದೆ. ಇದರೊಂದಿಗೆ ಬಿಜೆಪಿ ಸರ್ಕಾರ ನಡೆಸುತ್ತಿರುವಂತಹ ಕರ‍್ಯಕ್ರಮ, ಮೆರವಣಿಗೆಗಳು ಕೂಡ ಕಾರಣವಾಗಿದೆ ಎಂದು ಡಿ.ಕೆ ಸುರೇಶ್ ಆರೋಗ್ಯ ಸಚಿವರ ಹೇಳಿಕೆಗೆ ವಾಗ್ದಾಳಿ ನೀಡಿದ್ದಾರೆ.