ಬೆಂಗಳೂರು:- ದೇಶದಲ್ಲಿ ಮೊದಲ ಬಾರಿಗೆ ಮೀಸಲಾತಿ ಕಲ್ಪಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರು ಸಾಮಾಜಿಕ ಅಸಮಾನತೆ ಇರುವುದನ್ನು ಅರಿತಿದ್ದರು. ಶೋಷಿತರು ಹಾಗೂ ಹಿಂದುಳಿದವರ ಅಭಿವೃದ್ಧಿಗಾಗಿ ದೇಶದಲ್ಲಿ ಮೊದಲ ಬಾರಿಗೆ ಮೀಸಲಾತಿ ಕಲ್ಪಿಸಿದರು ಎಂದರು.
ಸ್ವಾತಂತ್ರ್ಯಪೂರ್ವದಲ್ಲಿ ಅಧಿಕಾರ ಮತ್ತು ಆಸ್ತಿ ಕೆಲವೇ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದ್ದರಿಂದ ಸಾಮಾಜಿಕ ಅಸಮಾನತೆ ಉಂಟಾಯಿತು ಎಂದರು. ಶಿಕ್ಷಣ ಎಂಬುದು ಜ್ಞಾನಸಂಪಾದನೆ. ಇದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹಲವರು ದಾರ್ಶನಿಕರು ಹೇಳಿದ್ದಾರೆ. ಅದರಂತೆಯೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲ ವರ್ಗದವರಿಗೂ ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿ ಕಲ್ಪಿಸಿದರು. ಅವರು ಕಾನೂನು ತಜ್ಞರು ಆಗಿರದಿದ್ದರೆ ದೇಶದಲ್ಲಿ ಸಮಾನತೆ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು.
ದೇವಾಂಗ ಸಮುದಾಯದ ಮಕ್ಕಳು ಇಂಜಿನಿಯರಿಂಗ್, ವೈದ್ಯಕೀಯ, ಕಾನೂನು ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು. ಐಎಎಸ್, ಐಪಿಎಸ್ ಸೇರಿ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಕಲಿಕೆಗಾಗಿ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆಬೇಕಾಗುತ್ತದೆ. ಇದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ. ವೃತ್ತಿಪರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುಬೇಕು ಎಂದು ಅವರು ತಿಳಿಸಿದರು.
ಹಿಂದುಳಿದ ವರ್ಗದಲ್ಲಿ ನೂರಕ್ಕು ಹೆಚ್ಚು ಜಾತಿಗಳಿವೆ. ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ ಸಮರ್ಪಕವಾಗಿ ಸಿಗುತ್ತಿಲ್ಲ. ಕೆಲವು ಸಮುದಾಯಗಳು ಮಾತ್ರ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಣತಿ ಸಮೀಕ್ಷೆಗಾಗಿ ಸಮಿತಿ ರಚಿಸಿದ್ದರು. ಜಾತಿಗಣತಿ ವರದಿಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳದೆಯೇ ಊಹಾಪೋಹವಾಗಿ ವ್ಯಾಖ್ಯಾನ ಮಾಡುವುದು ಬೇಡ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.