ಬೆಂಗಳೂರು: ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿನ ಪ್ರಾತಃಸ್ಮರಣೀಯರು. ಅವರ ಪ್ರಗತಿಪರ ಆಡಳಿತವನ್ನು ಕಂಡು ಮಹಾತ್ಮಾ ಗಾಂಧೀಜಿಯವರು ನಾಲ್ವಡಿ ಅವರನ್ನು ‘ರಾಜರ್ಷಿ’ ಎಂದು ಕರೆದರು. ಮೈಸೂರು ಸಂಸ್ಥಾನವನ್ನು ‘ರಾಮರಾಜ್ಯ’ ಎಂದಿದ್ದರು ಅವರ ಆಳ್ವಿಕೆಯ ಅವಧಿಯಲ್ಲಿಯೇ ಆಗಿರುವ ಸಮಾಜ ಮುಖಿ ಕಾರ್ಯಗಳು ಇಂದಿಗೂ ಪ್ರಾಶಸ್ತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ವಿಶ್ರಾಂತ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಿ. ಶಿವಲಿಂಗೇಗೌಡ ಅವರು ಅನುವಾದಿಸಿದ ಮೂಲ ʻಖಲ್ಹೀಲ್ ಗಿಬ್ರಾನ್ʼ ಅವರ ಕೃತಿ ʻಮುರಿದ ರೆಕ್ಕೆಗಳುʼ ಪುಸ್ತಕ ಬಿಡುಗೆಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಹೆಮ್ಮೆಯ ವಿಶ್ವಾಸಾರ್ಹ ಸಂಸ್ಥೆ. ಕನ್ನಡಿಗರ ವಿಶ್ವಾಸದ ಪ್ರತೀಕವಾಗಿ ನಮ್ಮಲ್ಲಿ ಇಂದು ೨೧೦೦ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳನ್ನು ಜನರು ನಂಬಿಕೆಯಿಂದ ಇಟ್ಟಿದ್ದಾರೆ. ಅದನ್ನು ಕನ್ನಡ ಸಾಹಿತ್ಯ ಪರಿಷತ್ತು ಯೋಗ್ಯ ರೀತಿಯಲ್ಲಿ ಪ್ರದಾನ ಆಡುತ್ತ ಬಂದಿದೆ. ಒಂದು ಸಂಸ್ಥೆ ನಿತ್ಯ ನಿರಂತರವಾಗಿರಬೇಕು ಎನ್ನುವುದು ನಾಲ್ವಡಿ ಅವರ ಸಾಮಾಜಿಕ ಕಾಳಜಿಯಾಗಿತ್ತು ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಶಾಸಕರಾದ ಶ್ರೀ ಡಿ.ಆರ್.ಪಾಟೀಲ್ ಅವರು ಮಾತನಾಡಿ ನಮ್ಮ ದೇಶದಲ್ಲಿ ಸಾಕ್ಷರರು ಆತ್ಮ ವಿಶ್ವಾಸ ಕಳೆದುಕೊಂಡು ದಾರಿತಪ್ಪುತ್ತಿದ್ದಾರೆ. ಅನಕ್ಷರಸ್ಥರು ವಿಶಾಲ ಹೃದಯದವರಿದ್ದಾರೆ. ನಮ್ಮ ತಪ್ಪನ್ನು ತಿಳಿಸುವ ಕೆಲಸ ಶಿಕ್ಷಣದಲ್ಲಿ ಆಗಬೇಕಿದೆ. ಶಿಕ್ಷಣದಲ್ಲಿ ನಮ್ಮತನವನ್ನು ಕಲಿಸುವ ಜೊತೆಗೆ ಸಮಾಜದ ಮೇಲಿನ ನಂಬಿಕೆ ವಿಶ್ವಾಸ ತಿಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.