ದೊಡ್ಡಬಳ್ಳಾಪುರ: ಈ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯ ಈ ದಿನ ಶುಕ್ರವಾರದಂದು ಸಿದ್ಧಿಯೋಗದಲ್ಲಿ ನಾಗರ ಪಂಚಮಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ನಾಗ ದೋಷದಿಂದ ಮುಕ್ತಿ ಪಡೆಯಲು ಭಕ್ತರು ನಾಗರ ವಿಗ್ರಹಗಳು, ಹುತ್ತಗಳಿಗೆ ವಿಶೇಷ ಪೂಜೆ ಪುನಸ್ಕಾರ ಮಾಡುವಲ್ಲಿ ನಿರತರಾಗಿದ್ದಾರೆ.
ಅದೇರೀತಿ ನಾಗಾರಾಧನೆಗೆ ಹೆಚ್ಚು ಪ್ರಸಿದ್ಧಿ ಪಡೆದಿರುವ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಸ್ಥಾನದಲ್ಲಿಂದು ನಾಗರ ಪಂಚಮಿ ಪ್ರಯುಕ್ತ ನಾಗರಕಲ್ಲುಗಳು ಹಾಗೂ ಹುತ್ತಗಳಿಗೆ ಹಾಲಿನ ಅಭಿಷೇಕ, ತುಪ್ಪದ ಅಭಿಷೇಕ ಸೇರಿದಂತೆ ಇನ್ನಿತರೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಪ್ರತಿ ವರ್ಷ ನಾಗರಪಂಚಮಿ ದಿನದಂದು ನಾಗರ ಕಲ್ಲುಗಳನ್ನು ಶುದ್ಧ ನೀರಿನಿಂದ ತೊಳೆದು ಅರಿಶಿನ, ಕುಂಕುಮ, ಹೂವಿಟ್ಟು ನಂತರ ನಾಗರ ಕಲ್ಲಿಗೆ ಹಾಲೆರೆದರೆ ಸರ್ಪದೋಷ ನಿವಾರಣೆಯಾಗಲಿದೆ ಎಂಬ ನಂಬಿಕೆ ಹಿನ್ನೆಲೆ ನಾಗ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಘಾಟಿ ಕ್ಷೇತ್ರದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ಎಲ್ಲಾ ಕಲ್ಲುಗಳಿಗೆ ಭಕ್ತರು ಅರಿಶಿನ, ಕುಂಕುಮ ಹಚ್ಚಿ ವಿಶೇಷ ಪೂಜೆ ನಡೆಸಿ ದೇವರ ಕೃಪೆಗೆ ಪಾತ್ರರಾದರು.