ಮಂಡ್ಯ:-ನಾಗಮಂಗಲದ ಗಲಭೆ ಕೇಸ್ ಗೆ ಸಂಬಂಧಿಸಿದಂತೆ 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಾಗಮಂಗಲ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದ್ದಾರೆ. ಕೋರ್ಟ್ ಮುಂದೆ ಬಂಧಿತರ ಪೋಷಕರು ಜಮಾವಣೆಗೊಂಡ ಹಿನ್ನಲೆ ಪೊಲೀಸ್ ಬಿಗಿ ಬಂದೋಬಸ್ತ್ ಒದಲಾಗಿಸಲಾಗಿತ್ತು.
ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರಿಂದ ಸ್ಥಳ ಪರಿಶೀಲನೆ ಮಾಡಲಾಗಿದೆ. ಪೊಲೀಸರ ಜೊತೆ ಸುಟ್ಟುಹೋದ ಅಂಗಡಿ ಮುಂಗಟ್ಟುಗಳನ್ನು ತಜ್ಞರು ಪರಿಶೀಲಿಸಿದ್ದು, ತನಿಖೆಗೆ ಅಗತ್ಯವಿರುವ ವಸ್ತುಗಳನ್ನು ಸಂಗ್ರಹಿಸಿಕೊಂಡಿದ್ದಾರೆ. FSL ತಜ್ಞರು ಸ್ಥಳದಲ್ಲಿ ಇಂಚಿಂಚೂ ಮಾಹಿತಿ ಸಂಗ್ರಹಿಸಿದ್ದಾರೆ.
ಜಿಲ್ಲೆಯ ನಾಗಮಂಗಲದಲ್ಲಿ ದಕ್ಷಿಣ ವಲಯ ಐಜಿಪಿ ನೇತೃತ್ವದಲ್ಲಿ ಪಥಸಂಚಲನ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆಗೆ ಬೋರಲಿಂಗಯ್ಯ ನೇತೃತ್ವದಲ್ಲಿ ರೌಂಡ್ಸ್ ಹಾಕಿದ್ದು, ಚನ್ನಕೇಶವ ದೇವಾಲಯ, ಪಾಂಡವಪುರ-ಬೆಳ್ಳೂರು ರಸ್ತೆ, ಮಂಡ್ಯ ವೃತ್ತ ಸೇರಿ ಹಲವು ಬಡಾವಣೆಗಳಲ್ಲಿ ಪಥಸಂಚಲನ ಮಾಡಲಾಗಿದೆ. ನಾಗಮಂಗಲ ಸಹಜ ಸ್ಥಿತಿಗೆ ತರಲು ಪೊಲೀಸರು ಪಥಸಂಚಲನ ಮಾಡಿದ್ದಾರೆ.
ಸಂಘರ್ಷದ ಬೆನ್ನಲ್ಲೇ ಅಲರ್ಟ್ ಆಗಿದ್ದ ಪೊಲೀಸರು, ನಿನ್ನೆ ರಾತ್ರಿಯೇ ಎಸ್ಪಿ, ಡಿಸಿ ಸೇರಿ ಹಿರಿಯ ಅಧಿಕಾರಿಗಳು ನಾಗಮಂಗಲಕ್ಕೆ ದೌಡಾಯಿಸಿದ್ರು. ಲಾಠಿಚಾರ್ಜ್ ಮಾಡಿ 2 ಗುಂಪುಗಳನ್ನ ಚದುರಿಸಿದ್ರು. ಪರಿಸ್ಥಿತಿ ಕೈ ಮೀರುತ್ತೆ ಅಂತಾ ಗೊತ್ತಾಗಿದ್ದೇ ತಡ, ಶನಿವಾರದ ವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಗಲಾಟೆ ಸಂಬಂಧ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನೂರಾರು ಸಂಖ್ಯೆ ಯುವಕರು ಗಲಾಟೆ ಮಾಡಿದ್ದರಿಂದ, ಉದ್ರಿಕ್ತ ಆರೋಪಿಗಳನ್ನ ಪತ್ತೆ ಹಚ್ಚೋದೇ ಪೊಲೀಸರಿಗೆ ಸವಾಲಾಗಿದೆ. ಸಿಸಿ ಕ್ಯಾಮರಾ ದೃಶ್ಯಗಳನ್ನ ಆಧರಿಸಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ.