ಬೆಂಗಳೂರು: ಮೇಕೆದಾಟು ಪಾದಯಾತ್ರೆ ಅಲ್ಲ, ಬರೀ ಮೈಲೇಜ್ ಯಾತ್ರೆ ಎಂದು ಸಚಿವ ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿರುವ ಕಾಂಗ್ರೆಸ್ಸಿನ 30ಕ್ಕೂ ಹೆಚ್ಚು ನಾಯಕರ ಮೇಲೆ ಗೃಹ ಇಲಾಖೆಯು ಈಗಾಗಲೇ ಎಫ್‌ಐಆರ್ ದಾಖಲಿಸಿದೆ. ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಗಳ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
ಇನ್ನೂ ಮೇಕೆದಾಟು ಯೋಜನೆಗೆ 2013ರಲ್ಲೇ ಹಸಿರು ನಿಶಾನೆ ಸಿಕ್ಕಿತ್ತು. ಆಗ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವೇ ಅಧಿಕಾರದಲ್ಲಿತ್ತು. ಅಂದಿನ ಸರಕಾರದಲ್ಲಿ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಈ ಯೋಜನೆಯ ಬಗ್ಗೆ ಆಸಕ್ತಿ ವಹಿಸಿದ್ದರು. ಆದರೆ, 2019ರವರೆಗೂ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ನಿಟ್ಟಿನಲ್ಲಿ ಒಂದೇ ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ. ಆಗ ಸಚಿವರಾಗಿದ್ದ ಶಿವಕುಮಾರ್ ಏಕೆ ಜಾಣ ಮೌನ ವಹಿಸಿದ್ದರು?’ ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ.
