ಉಡುಪಿ: ಉಡುಪಿ ನೇಜಾರಿನಲ್ಲಿ ಮನೆಯೊಂದರಲ್ಲಿ ನ.12 ರ ಹಾಡಹಗಲೇ ತಾಯಿ ಹಾಗೂ ಮೂವರು ಮಕ್ಕಳನ್ನು ಭೀಕರವಾಗಿ ಕೊಲೆ ಮಾಡಿರುವ ಕಿರಾತಕ, ಏರ್ ಇಂಡಿಯಾ ಎಕ್ಸ್ಪ್ರೆಸ್ ಕ್ಯಾಬಿನ್ ಕ್ರೂ ಪ್ರವೀಣ್ ಅರುಣ್ ಚೌಗುಲೆ (39) ಕೃತ್ಯ ನಡೆಸಿ ರಕ್ತಸಿಕ್ತ ಬಟ್ಟೆಯಲ್ಲೇ ಸ್ಥಳದಿಂದ ಪರಾರಿಯಾಗಿದ್ದು, ಆ ಬಟ್ಟೆಯನ್ನು ಮಂಗಳೂರು ತೆರಳುವ ಮಾರ್ಗ ಮಧ್ಯೆ ಸುಟ್ಟು ಹಾಕಿ ಸಾಕ್ಷ್ಯನಾಶ ನಡೆಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಕೃತ್ಯಕ್ಕೂ ಮುನ್ನ ಹೆಜಮಾಡಿ ಟೋಲ್ನಿಂದ ಆಚೆಗೆ ಕಾರು ನಿಲ್ಲಿಸಿದ್ದ ಹಂತಕ ಪ್ರವೀಣ್ ನೇಜಾರಿನಿಂದ ಪರಾರಿಯಾಗಿ ಬಂದು ತನ್ನ ಕಾರು ಏರಿ ಮಂಗಳೂರಿನತ್ತ ಹೊರಟಿದ್ದ. ರಕ್ತಸಿಕ್ತ ಬಟ್ಟೆಯಲ್ಲೇ ಮನೆಗೆ ಹೋದರೆ ಪತ್ನಿಗೆ ಅನುಮಾನ ಬರುವ ಹಿನ್ನೆಲೆಯಲ್ಲಿ ಹಾಗೂ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಮಂಗಳೂರಿಗೆ ತೆರಳುವ ಮುನ್ನವೇ ಸುರಕ್ಷಿತ ಜಾಗ ನೋಡಿಕೊಂಡು ಕೃತ್ಯದ ವೇಳೆ ತಾನು ಧರಿಸಿದ್ದ ಬಟ್ಟೆಯನ್ನು ಬಿಚ್ಚಿ ಸುಟ್ಟು ಹಾಕಿದ್ದ ಬಗ್ಗೆ ಪೊಲೀಸರಲ್ಲಿ ಬಾಯ್ಬಿಟ್ಟಿದ್ದಾನೆ.
ನ.20 ರಂದು ತನಿಖಾ ತಂಡಕ್ಕೆ ಈ ಸ್ಥಳ ತೋರಿಸುವುದಾಗಿ ಒಪ್ಪಿಕೊಂಡಿದ್ದು, ಸ್ಥಳ ಮಹಜರು ಮಾಡಲಾಗುತ್ತದೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ನೇಜಾರಿನ ಈ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರ ತನಿಖಾ ತಂಡ ಮಹತ್ವದ ಸಾಕ್ಷಿಯಾಗಿದ್ದ ಚೂರಿಯನ್ನು ನ.18 ರಂದು ಮಂಗಳೂರಿನ ಬಿಜೈ ಫ್ಲ್ಯಾಟ್ನಿಂದ ವಶಕ್ಕೆ ಪಡೆಯಲಾಗಿತ್ತು.
ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಕೇಸ್: ತನಿಖೆ ವೇಳೆ ಸ್ಪೋಟಕ ವಿಚಾರ ಬೆಳಕಿಗೆ
ಹಂತಕ ಪ್ರವೀಣ್ ಅರುಣ್ ಚೌಗುಲೆಯ ನಡೆ, ಚಲನ ವಲನದ ಗಮನಿಸುತ್ತಿದ್ದ ಪತ್ನಿಗೆ ತನ್ನ ಪತಿಗೆ ಬೇರೊಂದು ಯುವತಿ ಜತೆಯಲ್ಲಿ ಪ್ರೇಮ ಬೆಳೆದಿರುವ ಬಗ್ಗೆ ಕೆಲ ಸಮಯಗಳಿಂದ ಅನುಮಾನವಿತ್ತೆಂದು ತಿಳಿದು ಬಂದಿದೆ. ಆದರೆ ಯಾವ ಯುವತಿ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಪತಿ ತನ್ನ ಜತೆಗೆ ಒಳ್ಳೆಯವನಂತೆ ವರ್ತಿಸುತ್ತಿದ್ದ. ನಾಲ್ವರನ್ನು ಕೊಲೆ ಮಾಡಿ ಮನೆಗೆ ಬಂದರೂ ಪತ್ನಿಗೆ ಪತಿ ಹಂತಕ ಎನ್ನುವ ಬಗ್ಗೆ ಕಿಂಚಿತ್ತೂ ಅನುಮಾನವೇ ಬಂದಿರಲಿಲ್ಲ. ಈ ಬಗ್ಗೆ ಪತ್ನಿಯೇ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನ.12ರಂದು ಬೆಳಗ್ಗೆ ಕೆಲಸದ ಸಮಯಕ್ಕಿಂತಲೂ ಬೇಗನೇ ಮನೆಯಿಂದ ಹೊರಟು ಹೋಗಿದ್ದ. ಎಲ್ಲಿಗೆ ಹೋಗುತ್ತೇನೆ ಎನ್ನುವ ಮಾಹಿತಿಯನ್ನು ಪತ್ನಿಗೆ ಹೇಳಿರಲಿಲ್ಲ. ಕೊಲೆಗೈದು ಮನೆಗೆ ಬಂದು ತನ್ನ ಕೈಗೆ ಆಗಿರುವ ಗಾಯದ ಬಗ್ಗೆಯೂ ಹೇಳಿಕೊಂಡಿರಲಿಲ್ಲ. ಕೈಯ ಗಾಯವನ್ನು ಮುಚ್ಚಿಟ್ಟಿದ್ದ. ಸದ್ಯಕ್ಕೆ ಆತನ ಹಣಕಾಸು ವಹಿವಾಟು ಸಹಿತ ಬೇರೆ ಯಾವ ವ್ಯವಹಾರದ ಬಗ್ಗೆಯೂ ಮಾಹಿತಿ ಇಲ್ಲ. ಆದರೆ ತಿಂಗಳಿಗೆ 1 ಲಕ್ಷದ ವರೆಗೆ ವೇತನ ಪಡೆದುಕೊಳ್ಳುತ್ತಿದ್ದ ಎನ್ನಲಾಗುತ್ತಿದೆ. ಕಾರಿಗೆ 3 ಲಕ್ಷ ಡೌನ್ ಪೇಮೆಂಟ್ ಕೊಟ್ಟು ಖರೀದಿಸಿದ್ದ. ನೇಜಾರಿಗೆ ಬರುವ ಮುನ್ನ ಹಾಗೂ ಪರಾರಿಯಾಗುವುದಕ್ಕೆ ಬಳಸಿದ್ದ ಆ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.