ದೊಡ್ಡಬಳ್ಳಾಪುರ: ತಾಲೂಕಿನ ಕಂಟನಕುಂಟೆಯ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ಮಾಂಟೆಸ್ಸರಿ ವಿಭಾಗದ ಪ್ರೀ ನರ್ಸರಿ, ಎಲ್ ಕೆಜಿ, ಯುಕೆಜಿ, ಪೋಷಕರಿಗೆ ಬೆಳದಿಂಗಳ ಕೈತುತ್ತು(ಮೂನ್ ಲೈಟ್ ಡಿನ್ನರ್) ಕಾರ್ಯಕ್ರಮವನ್ನ ಶನಿವಾರ ಸಂಜೆ ಏರ್ಪಡಿಸಲಾಗಿತ್ತು. ಪೋಷಕರಿಗೆ ವರ್ಣರಂಜಿತ ರಂಗೋಲಿ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು. ಇದರ ಜೊತೆ ಬೆಂಕಿ ಇಲ್ಲದೆ ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ ಸುಮಾರು 100ಕ್ಕೂ ಅಧಿಕ ಪೋಷಕರು ಭಾಗವಹಿಸಿ ವಿಧವಿಧವಾದ ರುಚಿಕರ, ಆರೋಗ್ಯಕರವಾದ ತಿಂಡಿ ತಿನಿಸುಗಳನ್ನ ತಯಾರಿಸಿದರು.
ಸಂಜೆಯ ವೇಳೆಗೆ ಮಗುವಿನ ಜಪತೆ ಅಜ್ಜ ಅಜ್ಜಿಯರ ರ್ಯಾಂಪ್ ವಾಕ್, ನೃತ್ಯ ಬಹಳ ಎಲ್ಲರ ಗಮನ ಸೆಳೆಯುವಂತೆ ನೆರವೇರಿತು. ನಂತರ ವಿದ್ಯಾರ್ಥಿಯ ತಂದೆ-ತಾಯಿ ಜೊತೆಗೂಡಿ ನೃತ್ಯ ಪ್ರದರ್ಶನ ಬಹಳ ಅದ್ಧೂರಿಯಾಗಿ ನಡೆಯಿತು. ಇನ್ನೂ ಕಾರ್ಯಕ್ರಮಕ್ಕೆ ಮೆರುಗು ತಂದಿದ್ದು ಮೂನ್ ಲೈಟ್ ಡಿನ್ನರ್ ಕಾರ್ಯಕ್ರಮ. ತಾಯಿ ತನ್ನ ಮಗು ಊಟ ಮಾಡಲು ಹಠ ಮಾಡಿದಾಗ ಬೆಳದಿಂಗಳಲ್ಲಿ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಾಳೆ. ಅದರ ನೆನಪಿಗಾಗಿ ಇಂದು ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ತಾಯಿ ಮತ್ತು ಮಗುವಿನ ನಡುವಿನ ಸಂಬಂಧವನ್ನು ಮತ್ತಷ್ಟು ಹತ್ತಿರಗೊಳಿಸಲಾಯಿತು.
ಈ ರೀತಿಯ ಸಂಬಂಧಗಳನ್ನು ಗಟ್ಡಿಗೊಳಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಪೋಷಕರು, ಪುಟಾಣಿಗಳಿಗೆ ನನ್ನ ತುಂಬು ಹೃದಯದ ಧನ್ಯವಾದ ಎಂದು ಶಾಲೆಯ ಕಾರ್ಯದರ್ಶಿ ಶ್ರೀನಿವಾಸ್ ಹೇಳಿದರು. ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯು ರಂಗೋಲಿ ಸ್ಪರ್ಧೆ, ಮೂನ್ ಲೈಟ್ ಡಿನ್ನರ್, ಕಪಲ್ ಡ್ಯಾನ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಿ, ಪೋಷಕರು ಈ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಿರುವುದು ಸಂತಸದ ಸಂಗತಿ, ಪೋಷಕರಾದ ನಾವೂ ಸಹ ಉತ್ಸಾಹದಿಂದ ಎಲ್ಲಾ ಕಾರ್ಯಕ್ರಮಗಲ್ಲಿ ಭಾಗವಹಿಸಿ ನಮ್ಮ ಪ್ರತಿಭೆಯನ್ನು ಹೊರಹಾಕಿದ್ದೇವೆ ಎಂದು ವಿದ್ಯಾರ್ಥಿಯ ಪೋಷಕಿ ರಜನಿ ಹೇಳಿದರು.
ಬೆಂಕಿ ರಹಿತ ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ ಹಣ್ಣು-ಹಂಪಲು, ತರಕಾರಿ, ಕಾಳುಗಳನ್ನ ಬಳಸಿ ಪೌಷ್ಟಿಕಾಂಶಯುಕ್ತ, ಆರೋಗ್ಯಕರವಾದ ತಿಂಡಿ ತಿನಿಸುಗಳನ್ನ ಮಾಡಲಾಗಿದೆ. ಇತ್ತೀಚಿಗೆ ಎಲ್ಲರೂ ಜಂಕ್ ಫೂಢ್ ಗೆ ಮಾರುಹೋಗಿ ತಮ್ಮ ಆರೋಗ್ಯ ಹಾಳು ಮಾಡಿಕೊಂಡು ಆಸ್ಪತ್ರೆ ಸೇರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಉತ್ತಮ ಆರೋಗ್ಯ ಜೀವನ ನಡೆಸಲು ತಾಜಾ ಹಣ್ಣು-ಹಂಪಲು, ತರಕಾರಿ, ಮೊಳಕೆ ಕಾಳುಗಳ ಪಾತ್ರ ಬಹಳ ಮುಖ್ಯ ಎಂಬ ಸಂದೇಶ ಈ ಕಾರ್ಯಕ್ರಮ ನಮಗೆ ಮನವರಿಕೆ ಮಾಡಿಕೊಟ್ಟಿತು ಎಂದು ಮಮತಾ ಚಂದ್ರಶೇಖರ್ ಹೇಳಿದರು.
ಶಾಲೆ ಎಂದರೆ ಕೇವಲ ಪಠ್ಯ ಪುಸ್ತಕದಲ್ಲಿರುವ ವಿಷಯ ಅರಿತು ಒಳ್ಳೆ ಅಂಕ ಪಡೆದು ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗುವಂತೆ ಮಾಡುವುದಲ್ಲ, ಬದಲಿಗೆ ಪಠ್ಯದ ಜೊತೆ ಜೊತೆಯಲ್ಲಿ ಸಾಂಸ್ಕೃತಿಕ, ನೈತಿಕ, ಕ್ರೀಡಾ ಮನೋಭಾವ, ಅಮಾನವೀಯ ಮೌಲ್ಯ, ಕಲೆ, ಸಾಹಿತ್ಯ, ದೇಶ ಭಕ್ತಿ, ಸಂಬಂಧಗಳಿಗೆ ಬೆಲೆ ಕೊಡುವುದು ಸೇರಿದಂತೆ ಇತರೆ ಪಠ್ಯೇತರ ಚಟುವಟಿಕೆಗಳನ್ನು ಸಹ ಮಗುವಿಗೆ ಹೇಳಿಕೊಡುವುದು ಶಾಲೆಯ ಉದ್ದೇಶವಾಗಿರಬೇಕು. ಆಗ ಮಾತ್ರ ಮಗುವಿನ ಸರ್ವತೋಮುಖ ಬೆಳವಣಿಗೆಯಿಂದ ಪರಿಪಕ್ವವಾಗಿ, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಶಾಲಾ ಕೋಆರ್ಡಿನೇಟರ್ ನಾಗರಾಣಿ ಅವರು ತಿಳಿಸಿದರು.