ಉತ್ತರ ಕರ್ನಾಟಕದಲ್ಲಿ ಹಿಂಗಾರು ಮಳೆ ಹಾಗೂ ವಿದ್ಯುತ್ ಏಕ ಕಾಲಕ್ಕೆ ಕೈ ಕೊಟ್ಟಿದ್ದರಿಂದ ರೈತರು ಬೆಳೆ ಉಳಿಸಿಕೊಳ್ಳಲು ಕೆರೆ, ತಗ್ಗು, ಹಳ್ಳಗಳಲ್ಲಿನ ನೀರಿಗೆ ಮೊರೆ ಹೋಗಿದ್ದು, ಆ ನೀರು ಎತ್ತಲು ಬೇಕಾದ ಆಯಿಲ್ ಎಂಜಿನ್ ಪಂಪ್ಸೆಟ್ಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಕಳೆದ ತಿಂಗಳಿನಿಂದ ಮಳೆ ಬಾರದೇ ಕಂಗಾಲಾಗಿರುವ ರೈತರಿಗೆ ವಿದ್ಯುತ್ ನಿಗಮ ಕೇವಲ ಐದು ತಾಸು ಮಾತ್ರ ತ್ರಿಪೇಸ್ ವಿದ್ಯುತ್ ನೀಡಲಿದೆ. ಹಿಂಗಾರು ಬಿತ್ತನೆ ಮಾಡಿ ಮೋಡದತ್ತ ಮುಖ ಮಾಡಿರುವ ರೈತರಿನಿಗೆ ಇತ್ತ ಮಳೆಯೂ ಇಲ್ಲ, ಬೋರವೆಲ್ಗಳ ಮೂಲಕ ನೀರು ತೆಗೆದುಕೊಳ್ಳಲು ಸಮರ್ಪಕ ವಿದ್ಯುತ್ ಸಹ ಇಲ್ಲದಾಗಿದೆ.
ಕಳೆದ ಎರಡ್ಮೂರು ವರ್ಷಗಳಿಂದ ಮಳೆ ಚನ್ನಾಗಿ ಆಗಿದ್ದರಿಂದ ಹೆಚ್ಚುವರಿ ನೀರಿನ ಅಗತ್ಯ ಇರಲಿಲ್ಲ. ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಾನಸೂನ್ ಕೈಕೊಟ್ಟಿದ್ದರಿಂದ ಮುಂಗಾರು ಹಂಗಾಮಿನ ಬೆಳೆ ಕೈಗೆ ಬರಲಿಲ್ಲ. ಹಿಂಗಾರು ಬೆಳೆಯಾದರೂ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಅದು ಕೂಡಾ ನಿರಾಸೆಯನ್ನುಂಟು ಮಾಡಿದೆ.
ಕೆರೆ, ಹಳ್ಳಗಳಲ್ಲಿ ಜಲಮೂಲ ಇದ್ದರೂ ಅದನ್ನು ಹೊಲಕ್ಕೆ ತರಲು ಅಗತ್ಯವಾದ ಆಯಿಲ್ ಎಂಜಿನ್ ಪಂಪ್ಸೆಟ್ಗಳು ಸಿಗುತ್ತಿಲ್ಲ. ಕೆಲ ರೈತರು ತಮ್ಮ ಬಳಿ ಇರುವ ಆಯಿಲ್ ಎಂಜಿನ್ ಪಂಪ್ಸೆಟ್ಗಳನ್ನು ದುರಸ್ತಿ ಮಾಡಿಸಿಕೊಂಡು ಬಳಕೆ ಮಾಡುತ್ತಿದ್ದಾರೆ. ಉಳಿದ ರೈತರು ಬಾಡಿಗೆ ನೀಡಿ ಪಂಪ್ಸೆಟ್ಗಳು ಪಡೆಯಬೇಕೆಂದರೂ ಸಿಗುತ್ತಿಲ್ಲ. ಹೀಗಾಗಿ ಅಕ್ಕ ಪಕ್ಕದ ಊರುಗಳಿಂದ ಇಲ್ಲವೇ ತಮ್ಮ ಬೀಗರ ಬಳಿ ಇರುವ ಪಂಪ್ಸೆಟ್ಗಳನ್ನು ತಂದು ಜಮೀನುಗಳಿಗೆ ನೀರು ಉಣಿಸುತ್ತಿದ್ದಾರೆ.