ಭಾರತಕ್ಕೆ ವಿಶ್ವಕಪ್ ಸಿದ್ಧತೆಗೆ ವರುಣ ಅಡ್ಡಿ ಪಡಿಸಿದ್ದಾನೆ. ಹೀಗಾಗಿ ಎರಡೂ ಅಭ್ಯಾಸ ಪಂದ್ಯಗಳು ಫಲಿತಾಂಶ ರಹಿತವಾಗಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಅಸ್ಸೋಂನ ಗುವಾಹಟಿ ಮೈದಾನದಲ್ಲಿ ನಡೆಸಲಾಗಿತ್ತು. ಈ ಪಂದ್ಯಕ್ಕೆ ಟಾಸ್ ನಂತರ ಸುರಿದ ಮಳೆ ಒಂದು ಬಾಲ್ ಆಡಲು ಬಿಡಲಿಲ್ಲ. ಇಂದು ಕೇರಳದ ತಿರುವನಂತಪುರಂನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಇದ್ದ ಎರಡನೇ ಪಂದ್ಯವೂ ಮಳೆಯಿಂದ ರದ್ದಾಗಿದೆ.
ಭಾರತ ಆಸ್ಟ್ರೇಲಿಯಾದ ವಿರುದ್ಧ ಆಡಿದ ಮೂರು ಪಂದ್ಯವೇ ಅಭ್ಯಾಸ ಪಂದ್ಯವಾಗಿದೆ. ಆದರೆ ಅದರಲ್ಲಿ ಸಂಪೂರ್ಣ ವಿಶ್ವಕಪ್ ತಂಡ ಭಾಗವಹಿಸಿರಲಿಲ್ಲ. ಮೊದಲೆಡು ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಕುಲ್ದೀಪ್ ಯಾದವ್ಗೆ ವಿಶ್ರಾಂತಿ ನೀಡಲಾಗಿತ್ತು. ಮೂರನೇ ಪಂದ್ಯದಲ್ಲಿ ಈ ನಾಲ್ವರು ತಂಡ ಸೇರಿದ್ದರು. ಆದರೆ, ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ ವಿಶ್ವಕಪ್ ತಂಡದ ಆಟಗಾರರಿಗೆ ಮೂರನೇ ಪಂದ್ಯಕ್ಕೆ ರೆಸ್ಟ್ ಕೊಡಲಾಗಿತ್ತು.

ತಿರುವನಂತರಪುರ ಮೈದಾನದಲ್ಲಿ ನಾಲ್ಕು ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈ ಎಲ್ಲಾ ಪಂದ್ಯಗಳಿಗು ಮಳೆ ಅಡ್ಡಿ ಉಂಟುಮಾಡಿದೆ. ಸಪ್ಟೆಂಬರ್ 29 ರಂದು ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ, ಸೆ.30 ಆಸ್ಟ್ರೇಲಿಯಾ vs ನೆದರ್ಲ್ಯಾಂಡ್ಸ್ ಮತ್ತು ಅಕ್ಟೋಬರ್ 3 ರಂದು ಭಾರತ vs ನೆದರ್ಲ್ಯಾಂಡ್ಸ್ ಪಂದ್ಯ ಸಂಪೂರ್ಣ ಫಲಿತಾಂಶ ರಹಿತವಾದರೆ, ನಿನ್ನೆ ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ ಪಂದ್ಯ ಮಳೆ ಬಂದರೂ ಡಿಎಲ್ಎಸ್ ನಿಯಮದನ್ವಯ ಪಂದ್ಯವನ್ನು ನಡೆಸಲಾಯಿತು. ಇಂದು ಅಭ್ಯಾಸ ಪಂದ್ಯದ ಕೊನೆಯ ದಿನವಾಗಿದೆ. ಅಕ್ಟೋಬರ್ 5 ರಂದು ವಿಶ್ವಕಪ್ನ ಉದ್ಘಾನೆ ಆಗಲಿದೆ.

