29 ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದ ಎಆರ್ ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನ ಪಡೆದುಕೊಂಡಿದ್ದಾರೆ. ಏಕಾಏಕಿ ಡಿವೋರ್ಸ್ ಘೋಷಿಸಿದ್ದು ಪ್ರತಿಯೊಬ್ಬರಿಗೂ ಶಾಕ್ ಆಗಿದೆ. ಸೈರಾ ಬಾನು ವಿಚ್ಚೇಧನ ಘೋಷಿಸಿದ ಕೆಲವೇ ಗಂಟೆಗಳಲ್ಲಿ ರೆಹಮಾನ್ ಬ್ಯಾಂಡ್ನಲ್ಲಿ ಇದ್ದ ಮೋಹಿನಿ ಡೇ ಕೂಡ ಪತಿ ಮಾರ್ಕ್ ಜೊತೆ ವಿಚ್ಛೇದನ ಪಡೆದಿದ್ದಾರೆ. ಇದು ಚರ್ಚೆಯ ಕೇಂದ್ರ ಬಿಂದು ಆಗಿದೆ. ಈ ಎರಡೂ ವಿಚ್ಛೇದನವನ್ನು ಲಿಂಕ್ ಮಾಡಲಾಗಿದೆ. ಈ ಬಗ್ಗೆ ಮೋಹಿನಿ ಡೇ ಪ್ರತಿಕ್ರಿಯೆ ನೀಡಿದ್ದಾರೆ.
ರೆಹಮಾನ್ ಹಾಗೂ ಮೋಹಿನಿ ಮಧ್ಯೆ ಏನೋ ನಡೆಯುತ್ತಿದ್ದು ಇದೇ ಕಾರಣಕ್ಕೆ ಇಬ್ಬರು ಒಟ್ಟೊಟ್ಟಿಗೆ ಡಿವೋರ್ಸ್ ಘೋಷಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಮೋಹಿನಿ, ‘ಸಂದರ್ಶನಕ್ಕಾಗಿ ನನಗೆ ಆಹ್ವಾನ ಬರುತ್ತಿದೆ. ಅದು ಯಾಕೆ ಎಂದು ನನಗೆ ಗೊತ್ತು. ನಾನು ಅದನ್ನು ಗೌರವಯುತವಾಗಿ ತಿರಸ್ಕರಿಸುತ್ತಿದ್ದೇನೆ. ವದಂತಿ ಹೆಚ್ಚಿಸಲು ನನಗೆ ಇಷ್ಟ ಇಲ್ಲ’ ಎಂದಿದ್ದಾರೆ.
‘ನನಗೆ ನನ್ನ ಎನರ್ಜಿ ಬಗ್ಗೆ ನಂಬಿಕೆ ಇದೆ. ಅದನ್ನು ವದಂತಿಗಳನ್ನು ಹಬ್ಬಿಸಲು ಖರ್ಚು ಮಾಡುವುದಿಲ್ಲ. ಖಾಸಗಿತನಕ್ಕೆ ಗೌರವ ನೀಡಿ’ ಎಂದು ಅವರು ಕೋರಿದ್ದಾರೆ. ರೆಹಮಾನ್ ಹಾಗೂ ಸೈರಾ ದೂರ ಆಗಲು ಮೋಹಿನಿ ಕಾರಣ ಎಂದು ಹೇಳಲಾಗಿತ್ತು. ಆದರೆ, ಸೈರಾ ತಂಡದವರು ಇದನ್ನು ಅಲ್ಲ ಗಳೆದಿದ್ದಾರೆ.