ವಿಜಯಪುರ:- ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ ಎಂದು ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಆರೋಪಿಸಿದರು. ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಬಿಐ, ಇಡಿ, ಐಟಿಗಳನ್ನು ತನ್ನ ಪಕ್ಷದ ಮೋರ್ಚಾಗಳಂತೆ ಮಾಡಿಕೊಂಡಿದೆ. ವಿರೋಧ ಪಕ್ಷಗಳನ್ನು ಹತ್ತಿಕ್ಕಲು, ವಿರೋಧಿ ನಾಯಕರಿಗೆ ಚಿತ್ರಹಿಂಸೆ ಕೊಡಲು ಅವುಗಳನ್ನು ಬಳಸುತ್ತಿದೆ. ಪಕ್ಷಗಳಲ್ಲಿ ಹೇಗೆ ಯುವ ಮೋರ್ಚಾ, ಮಹಿಳಾ ಮೋರ್ಚಾ ಇರುತ್ತದೆಯೋ ಅದೇ ರೀತಿ ಬಿಜೆಪಿ ಸಿಬಿಐ ಮೋರ್ಚಾ, ಇಡಿ ಮೋರ್ಚಾ ಅಂತ ಮಾಡಿಕೊಂಡು ಆಟ ಆಡುತ್ತಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಭ್ರಷ್ಟಾಚಾರ ಇಲ್ಲವೆ? ಎಲ್ಲರೂ ಅವರು ಸತ್ಯಹರಿಶ್ಚಂದ್ರರಿದ್ದಾರಾ? ಯಾಕೆ ಒಬ್ಬರ ಮೇಲೂ ದಾಳಿಯಾಗಿಲ್ಲ, ಬಂಧನವಾಗಿಲ್ಲ? ಎಲ್ಲವೂ ವಿರೋಧ ಪಕ್ಷಗಳ ಮೇಲೆ ಬಳಸಿಕೊಳ್ಳಲಾಗುತ್ತಿದೆ? ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಡಿಕೆಶಿ ಅವರ ಕಾಲ ಕೆಳಗೆ ಸಿಎಂ ಇದ್ದಾರೆ ಎನ್ನುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕಾನೂನಾತ್ಮಕವಾಗಿಯೇ ಡಿ.ಕೆ.ಶಿವಕುಮಾರ ಅವರ ಸಿಬಿಐ ಕೇಸ್ ಅನ್ನು ಹಿಂದಕ್ಕೆ ಪಡೆಯಲು ನಿರ್ಣಯಿಸಲಾಗಿದೆ. ಅಡ್ವೊಕೇಟ್ ಜನರಲ್ ಅವರ ಸಲಹೆಯಂತೆಯೇ ಕೇಸು ಹಿಂಪಡೆಯಲಾಗಿದೆ. ಇನ್ನುಮುಂದೆ ಕಾನೂನಾತ್ಮಕ ಹೋರಾಟವಿದೆ. ಏನಾಗುತ್ತೆ ನೋಡೋಣ ಎಂದರು.