ಬೆಂಗಳೂರು:- ಕುಮಾರಸ್ವಾಮಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲದಿರುವುದು ತಿಳಿದ ವಿಚಾರವಾಗಿದೆ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕುಮಾರಸ್ವಾಮಿ ತಮ್ಮ ದ್ವಂದ್ವ ನಿಲುವುಗಳ ಕಾರಣಕ್ಕಾಗಿಯೇ ತಮ್ಮ ನಾಯಕತ್ವದ ಮೌಲ್ಯವನ್ನು ದಿನೇ ದಿನೆ ಕಳೆದುಕೊಳ್ಳುತ್ತಿದ್ದಾರೆ.
ಒಳಗೆ ಬಿಜೆಪಿಗೆ ಬೆಂಬಲ ನೀಡಿ, ಸದನದ ಹೊರಗೆ ಪ್ರತಿಭಟನೆ ಮಾಡುವ ನಾಟಕ ಆಡಿದ್ದ ಕುಮಾರಸ್ವಾಮಿ ಅವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ಸಚಿವ ಹೆಚ್ ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಉತ್ತಮ ಸಾರ್ವಜನಿಕ ಬದುಕಿನ ಭಾಗವಾಗಿ ಈ ಹಿಂದೆಯೇ ಸೈದ್ಧಾಂತಿಕ ಬದ್ಧತೆಯ ಪ್ರಾಮುಖ್ಯತೆ ಮತ್ತು ಅದು ನಾಯಕತ್ವದ ಮೇಲೆ ಉಂಟು ಮಾಡುವ ಪರಿಣಾಮದ ಬಗ್ಗೆ ಒಳ್ಳೆಯ ಮನಸ್ಸಿನಿಂದ ಹಿಂದೆಯೇ ಅವರಿಗೆ ನಾನು ಎಚ್ಚರಿಸಿದ್ದೆ. ಆದರೆ, ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸದ ಅವರು ಈಗ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿ ಸೈದ್ಧಾಂತಿಕವಾಗಿ ತಾವೆಷ್ಟು ಅಧಃಪತನಕ್ಕೆ ಜಾರಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಒಂದು ಉತ್ತಮ ಪ್ರಾದೇಶಿಕ ಪಕ್ಷವಾಗಿ ಸಂಘಟನೆ ಮತ್ತು ವಿಷಯಾಧಾರಿತ ಹೋರಾಟಗಳ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ತೋರಬೇಕಿದ್ದ ಅವರು ಈಗಲೂ ಸಹ ಅಧಿಕಾರ ಎಂದರೆ ಅತಂತ್ರ ಸ್ಥಿತಿಯಲ್ಲಿ ದೊರಕುವ ಅನಾಯಾಸ ಅವಕಾಶ ಎಂದುಕೊಂಡಿದ್ದು ಇದೊಂದು ನಗೆಪಾಟಲಿನ ವಿಷಯವಾಗಿದೆ. ಬಿಜೆಪಿಯ ಎಲ್ಲ ಜನ ವಿರೋಧಿ ನೀತಿಗಳ ಸಂದರ್ಭದಲ್ಲಿ ಮೌನವಾಗಿದ್ದು ಕೆಲವಕ್ಕೆ ಬೆಂಬಲವನ್ನೂ ನೀಡಿದ ಕುಮಾರಸ್ವಾಮಿ ಅವರು ಅಧಿಕಾರ ಸಿಕ್ಕಿಲ್ಲ ಎಂಬ ಒಂದೇ ಕಾರಣಕ್ಕೆ ಬಹಳಷ್ಟು ಹತಾಶೆಯಿಂದ ವರ್ತಿಸುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.