ಸಿದ್ಧಾಪುರ:- ಜಹೀರ್ ಅಹ್ಮದ್ ಹೇಳಿಕೆ ಖಂಡನೀಯ ಎಂದು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ಸಚಿವ ಜಹೀರ್ ಅಹ್ಮದ್ ತೆಲಂಗಾಣದ ಚುನಾವಣಾ ಪ್ರಚಾರದ ಭಾಷಣದಲ್ಲಿ ಸಾಂವಿಧಾನಿಕ ಸ್ಥಾನವಾದ ಸ್ಪೀಕರ್ ಹುದ್ದೆಗೆ ಧರ್ಮ ಮತ್ತು ಜಾತಿಯ ಭಾವನೆ ಮೂಡಿಸಿರುವುದು ಅಕ್ಷಮ್ಯ ಅಪರಾಧವಾಗಿದೆ.
ಸಾಂವಿಧಾನಿಕ ಹುದ್ದೆಯ ಗೌರವಕ್ಕೆ ಧಕ್ಕೆ ತಂದಿರುವ ಸಚಿವ ಜಹೀರ್ ಅಹ್ಮದ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಮತ್ತು ಸಭಾಧ್ಯಕ್ಷ ಯು.ಟಿ ಖಾದರ್ ಅವರು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು ಸಿದ್ದರಾಮಯ್ಯ ಅವರು ಈ ಹೇಳಿಕೆಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದರು.
ಕಾಂಗ್ರೆಸ್ ಪಕ್ಷ ನೂತನ ಶಿಕ್ಷಣ ನೀತಿಯನ್ನು ರದ್ದುಗೊಳಿಸಿ, ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದೆ. ಇದು ಪೂರ್ವಾಪರ ಚಿಂತನೆ ಇಲ್ಲದೆ, ತಜ್ಞರ ಸಲಹೆ ಪಡೆಯದೆ ಏಕಾಏಕಿ ಪಡೆದ ನಿರ್ಧಾರವಾಗಿದೆ. ಇದರಿಂದ ಶಿಕ್ಷಣದಲ್ಲಿ ಗೊಂದಲ ಉಂಟಾಗುತ್ತಿದ್ದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸಿದ್ಧರಾಮಯ್ಯ ಅವರು ಎಡಪಂಥೀಯರ ಕೈಗೊಂಬೆಯಾಗಿ ಶಿಕ್ಷಣ ನೀತಿಯನ್ನು ಬದಲಿಸಲು ಮುಂದಾಗಿದ್ದಾರೆ. ನೂತನ ಶಿಕ್ಷಣ ನೀತಿಯನ್ನೇ ಪುನಃ ಜಾರಿಗೊಳಿಸಬೇಕೆಂದು ರಾಜ್ಯಾದ್ಯಂತ ನ.15 ರಿಂದ 30ರವರೆಗೆ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ತಾಲ್ಲೂಕಿನ ಸ್ಥಿತಿಗತಿ ಅವಲೋಕಿಸಿದರೆ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.